ಹುಬ್ಬಳ್ಳಿ:ನೈರುತ್ಯ ರೈಲ್ವೆ ವಲಯವು ಆಟೊಮೊಬೈಲ್ ತಯಾರಕರ ಆಯ್ಕೆಯ ಉತ್ತಮ ಸಾರಿಗೆ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಸುರಕ್ಷಿತ, ವಿಶ್ವಾಸಾರ್ಹ ಮತ್ತು ವಾಹನಗಳಿಗೆ ಸಮಯೋಚಿತ ಸಾರಿಗೆಯಾಗಿದ್ದು ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ ಸರಕು ಸಾಗಣೆಯಿಂದ 4,600 ಕೋಟಿ ರೂ. ಆದಾಯ ಗಳಿಸಿದೆ.
ಹುಬ್ಬಳ್ಳಿಯ ನೈರುತ್ಯ ರೈಲ್ವೆಯು 2022-23ರ ಆರ್ಥಿಕ ವರ್ಷದಲ್ಲಿ 46.7 ಮಿಲಿಯನ್ ಟನ್ ಮೂಲ ಸರಕು ಸಾಗಣೆ ಮಾಡಿದೆ. ಈ ಹಿಂದಿನ 15 ವರ್ಷಗಳಲ್ಲಿ 46 ಮಿಲಿಯನ್ ಟನ್‌ಗಳ ಸರಕು ಸಾಗಣೆಯ ಹಳೆಯ ದಾಖಲೆ ಮುರಿದಿದೆ. 2007-08ರಲ್ಲಿ 46.24 ಮಿಲಿಯನ್ ಟನ್ ಸರಕು ಸಾಗಣೆ ಮಾಡಿದ್ದು ದಾಖಲೆಯಾಗಿತ್ತು.
ಸಿದ್ಧ ಸರಕು ರಫ್ತು: ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ರೈಲ್ವೆ ಇಲಾಖೆ ಪ್ರಮುಖ ಪಾತ್ರವಹಿಸುತ್ತಿದೆ. ರೈಲ್ವೆಯು ತ್ವರಿತ, ಸುರಕ್ಷಿತ, ಆರ್ಥಿಕ ಸಾಗಣೆ, ಬೃಹತ್ ಸರಕು, ಕೈಗಾರಿಕೆಗಳಿಗೆ ಕಚ್ಚಾ ಸಾಮಗ್ರಿ ಪೂರೈಕೆ ಹಾಗೂ ಉದ್ಯಮದಿಂದ ಸಿದ್ಧಪಡಿಸಿದ ಸರಕು ರಫ್ತು ಮತ್ತು ದಿನನಿತ್ಯ ಬಳಕೆಯ ವಸ್ತುಗಳನ್ನು ಸಾಗಿಸುತ್ತಿದೆ. 2022-23ರ ಆರ್ಥಿಕ ವರ್ಷದಲ್ಲಿ ನೈರುತ್ಯ ರೈಲ್ವೆ 2.05 ಮಿಲಿಯನ್ ಟನ್ ಖನಿಜ ತೈಲ, 1.07 ಮಿಲಿಯನ್ ಟನ್ ಸಿಮೆಂಟ್, 1.45 ಮಿಲಿಯನ್ ಟನ್ ಸಕ್ಕರೆ ಮತ್ತು 509 ರೇಕ್‌ಗಳ ಆಟೊಮೊಬೈಲ್‌ಗಳನ್ನು ಸಾಗಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
ದಿಗ್ಗಜ ಕಂಪನಿಗಳ ಉತ್ತಮ ಗ್ರಾಹಕ: ನೈರುತ್ಯ ರೈಲ್ವೆಯು ಟೊಯೊಟಾ, ಕಿಯಾ, ಸುಜುಕಿ, ಅಶೋಕ್ ಲೇಲ್ಯಾಂಡ್, ಟಿವಿಎಸ್ ಸೇರಿದಂತೆ ಇನ್ನಿತರ ಕಂಪನಿಗಳು ಹೊಸದಾಗಿ ತಯಾರಿಸಿದ ವಾಹನಗಳಿಗೆ, ಪರಿಸರಸ್ನೇಹಿ, ಅಪಘಾತ-ಮುಕ್ತ ಹಾಗೂ ಸರಿಯಾದ ಸಮಯಕ್ಕೆ ಸಾಗಿಸುವ ಮೂಲಕ ರೈಲ್ವೆಯು ಆಟೊಮೊಬೈಲ್ ತಯಾರಿಕರ ಪ್ರಮುಖ ಆಯ್ಕೆಯ ಸಾರಿಗೆಯಾಗಿ ಹೊರಹೊಮ್ಮಿದೆ.