ಹಂತ ಹಂತವಾಗಿ ಒಂದೊಂದು ಗ್ಯಾರೆಂಟಿ ಯೋಜನೆಯನ್ನು ಜಾರಿಗೆ ತರುತ್ತೇವೆ. ದಾವಣಗೆರೆ : ಈಗಾಗಲೇ ಶಕ್ತಿ ಯೋಜನೆ ಜಾರಿಗೆ ತಂದಿದ್ದೇವೆ. ನಾಳೆ ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಬಳಿಕ ಡಿಸೆಂಬರ್ನಲ್ಲಿ ಯುವ ನಿಧಿ ಯೋಜನೆ ಜಾರಿಗೊಳಿಸುತ್ತೇವೆ ಎಂದು ಆಹಾರ ಮತ್ತು ನಾಘರಿಕ ಸರಬರಾಜು ಇಲಾಖೆ ಸಚಿವ ಕೆ ಹೆಚ್ ಮುನಿಯಪ್ಪ ಮಾಹಿತಿ ನೀಡಿದರು.
ನಗರದಲ್ಲಿಂದು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದೊಂದು ಗ್ಯಾರೆಂಟಿ ಯೋಜನೆಯನ್ನು ಹೀಗೆ ಹಂತ ಹಂತವಾಗಿ ಜಾರಿಗೆ ತರುತ್ತೇವೆ. ಬಿಪಿಎಲ್ ಕಾರ್ಡ್ ಗಳನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ಪರಿಷ್ಕರಣೆ ಮಾಡಿ ನಂತರ ತೀರ್ಮಾನ ಕೈಗೊಳ್ಳುತ್ತೇವೆ. ಎಲ್ಲಾ ಕಾರ್ಡ್ ದಾರರಿಗೆ ಅಕೌಂಟ್ ಮೂಲಕ ಹಣವನ್ನು ಹಾಕಲಾಗುತ್ತಿದೆ. ಕೆಲವೊಂದು ಕಾರ್ಡ್ಗಳ ಅಕೌಂಟ್ನ ತೊಂದರೆ ಇದ್ದ ಹಿನ್ನೆಲೆ ಹಣ ಹಾಕಿಲ್ಲ. ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಕಾರ್ ಹೊಂದಿದ್ದವರ ಬಿಪಿಎಲ್ ಕಾರ್ಡ್ ರದ್ದತಿ ಬಗ್ಗೆ ಯೋಚನೆ ಮಾಡಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುತ್ತೇವೆ ಎಂದರು.
ಮೋದಿ ವಿರುದ್ದ ವಾಗ್ದಾಳಿ; ಹೆಚ್ ಆಂಜನೇಯ :ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಹೆಚ್ ಆಂಜನೇಯ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾಂಗ್ರೆಸ್ ಪಕ್ಷವನ್ನು ವಿಪರೀತ ಟೀಕೆ ಮಾಡುತ್ತಿದ್ದರು. ಗೃಹೋಪಯೋಗಿಸಿ ವಸ್ತುಗಳು, ಅಡುಗೆ ಬಳಕೆ ವಸ್ತುಗಳು ಗಗನಕ್ಕೇರಿವೆ. ಬೆಲೆ ಏರಿಕೆಯಿಂದ ಬಡವರ ಜೀವನ ದುಸ್ತರವಾಗಿದೆ ಎಂದು ಬೊಬ್ಬೆ ಹೊಡೆದು ಅಧಿಕಾರಕ್ಕೆ ಬಂದಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಬೆಲೆ ಏರಿಕೆ ಇತ್ತು. ಇದೀಗ ಎಷ್ಟು ಬೆಲೆ ಏರಿಕೆ ಆಗಿದೆ. ನೀವು ಬಂದು ಬೆಲೆ ಇಳಿಸಿದ್ರಾ ಎಂದು ಬಿಜೆಪಿಯವರಿಗೆ ಪ್ರಶ್ನಿಸಿದರು. ಕೇಂದ್ರ ಸರ್ಕಾರದ ಬೆಲೆ ಏರಿಕೆ ಮಾಡಿದ್ದರಿಂದ ಬಡವರು, ಮಧ್ಯಮ ವರ್ಗದವರು ಜೀವನ ಮಾಡಲು ಆಗದಂತಾಗಿದೆ. ಅದ್ದರಿಂದ ನಮ್ಮ ಸರ್ಕಾರ ಮನೆಯ ಯಜಮಾನಿಗೆ ಎರಡು ಸಾವಿರ ರೂ. ಅಕೌಂಟಿಗೆ ಹಾಕುತ್ತಿದೆ. ಇದಕ್ಕೆ ನಮ್ಮ ಭಾವಿ ಪ್ರಧಾನಿ ಎಂದೇ ಬಿಂಬಿಸಲ್ಪಟ್ಟ ಸಂಸದ ರಾಹುಲ್ ಗಾಂಧಿ ಅವರು ನಾಳೆ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಿದ್ದು, ಇದರಿಂದ ಮಹಿಳೆಯರಿಗೆ ಸಾಕಷ್ಟು ಪ್ರಯೋಜನ ಆಗಲಿದೆ ಎಂದರು.
ಜನರಿಗೆ ಮೋಸದ ಗ್ಯಾರಂಟಿ ಎಂದು ಅರ್ಥ ಆಗಿದೆ :ಮತ್ತೊಂದೆಡೆ ಹಾವೇರಿಯಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು, ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಲೋಕಸಭಾ ಚುನಾವಣೆ ಎದುರಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಜನರನ್ನು ಒಂದು ಸಲ ಮೋಸ ಮಾಡಬಹುದು. ಆದರೆ ಮತ್ತೆ ಮತ್ತೆ ಮೋಸ ಮಾಡಲು ಆಗುವುದಿಲ್ಲ. ಇದು ಮೋಸದ ಗ್ಯಾರಂಟಿ ಅಂತ ಜನರಿಗೆ ಈಗಾಗಲೇ ಅರ್ಥ ಆಗಿದೆ. ಜನರು ಲೋಕಸಭಾ ಚುನಾವಣೆಗಾಗಿ ಕಾಯ್ತಾ ಇದ್ದಾರೆ. ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಉತ್ಸುಕರಾಗಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಜನರು ನರೇಂದ್ರ ಮೋದಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಹೀಗಾಗಿ ಅವರು ಖಂಡಿತ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ ಎಂದು ಕಾಂಗ್ರೆಸ್ ಗ್ಯಾರಂಟಿಗಳ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ :ನಾಡಹಬ್ಬ ದಸರಾ ಉದ್ಘಾಟಿಸಲಿರುವ ಹಂಸಲೇಖ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ