ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ದಾವಣಗೆರೆ : ಧಾರವಾಡದಿಂದ ಬೆಂಗಳೂರಿಗೆ ಚಲಿಸುತ್ತಿದ್ದ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ರೈಲಿನ ಸಿ4 ಕೋಚ್ನ ಗಾಜಿನ ಕಿಟಕಿಗೆ ಹಾನಿಯಾಗಿದೆ. ದಾವಣಗೆರೆ ನಗರದ ಕರೂರು- ದೇವರಾಜ ಅರಸ್ ಬಡಾವಣೆ ಮಾರ್ಗಮಧ್ಯೆ ಶನಿವಾರ ಮಧ್ಯಾಹ್ನ ಘಟನೆ ನಡೆದಿದೆ.
ರೈಲು ಕರೂರು ಗೂಡ್ಸ್ ಶೆಡ್ ಕಡೆಯಿಂದ ದೇವರಾಜ ಅರಸು ಬಡಾವಣೆ ಮಾರ್ಗವಾಗಿ ಸಾಗುತ್ತಿದ್ದಾಗ ರೈಲಿನ ಎಡಬದಿಗೆ ಯಾರೋ ಕಿಡಿಗೇಡಿಗಳು ಬಲವಾಗಿ ಕಲ್ಲು ಹೊಡೆದಿದ್ದಾರೆ. ಕಲ್ಲೇಟಿನಿಂದ ರೈಲಿನ 3 ಹಾಗೂ 4ನೇ ಬೋಗಿಯ ಗಾಜು ಹೊರಭಾಗದಲ್ಲಿ ಬಿರುಕು ಬಿಟ್ಟಿದೆ. ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿದಂತೆ ರೈಲ್ವೆ ಅಧಿಕಾರಿಗಳು ಕಿಟಕಿ ಪರಿಶೀಲನೆ ನಡೆಸಿದರು. ಬಳಿಕ, ದಾವಣಗೆರೆ ರೈಲ್ವೆ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ರೈಲ್ವೆ ಪೊಲೀಸ್ ಅಧಿಕಾರಿಗಳಾದ ಕೋನ ರೆಡ್ಡಿ ಹಾಗೂ ಸಿಬ್ಬಂದಿ ಆರೋಪಿಗೆ ತೀವ್ರ ಶೋಧ ಕೈಗೊಂಡಿದ್ದಾರೆ. ಪ್ರಯಾಣಿಕರು ಕೂಡ ಘಟನೆಯಿಂದ ಕೆಲಕಾಲ ಆತಂಕಗೊಂಡ ದೃಶ್ಯ ಕಂಡುಬಂತು.
ಇದನ್ನೂ ಓದಿ :Vande Bharat : ಬೆಂಗಳೂರು - ಧಾರವಾಡ ವಂದೇ ಭಾರತ್ ರೈಲಿಗೆ ಇಂದು ಪ್ರಧಾನಿಯಿಂದ ಚಾಲನೆ : ಪ್ರಯಾಣದ ದರ ಎಷ್ಟು ಗೊತ್ತಾ?
ಬೆಂಗಳೂರು - ಧಾರವಾಡ ಮಧ್ಯೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಿದ ನಾಲ್ಕೇ ದಿನಕ್ಕೆ ಈ ಘಟನೆ ಜರುಗಿದ್ದು ರೈಲ್ವೆ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಸಾರ್ವಜನಿಕ ಆಸ್ತಿ ಹಾನಿ ಮಾಡುವುದು ಶಿಕ್ಷಾರ್ಹ ಅಪರಾಧ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ :Vande Bharat Express : ಬೆಂಗಳೂರು - ಧಾರವಾಡ ಸೇರಿ ಐದು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ
ರೈಲಿಗೆ ಜೂನ್ 27ರಂದು ಚಾಲನೆ ಸಿಕ್ಕಿತ್ತು : ರಾಜ್ಯದ ಎರಡನೇ ವಂದೇ ಭಾರತ್ ರೈಲು ಬೆಂಗಳೂರು ಧಾರವಾಡ ಎಕ್ಸ್‌ಪ್ರೆಸ್ ಜೂನ್ 27ರಿಂದ ಸಂಚಾರ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆನ್‌ಲೈನ್ ಮೂಲಕ ಹಸಿರು ನಿಶಾನೆ ತೋರಿದ್ದರು. ಈ ರೈಲು ಬೆಳಗ್ಗೆ ಬೆಂಗಳೂರಿನಿಂದ ಹೊರಟು ಮಧಾಹ್ನ ಧಾರವಾಡ ತಲುಪಿ ಮತ್ತೆ ಬೆಂಗಳೂರಿಗೆ ಹಿಂದಿರುಗುತ್ತದೆ. ಪ್ರತಿ ಮಂಗಳವಾರ ಹೊರತುಪಡಿಸಿ ವಾರದ 6 ದಿನ ಸಂಚಾರ ನಡೆಸಲಿದೆ. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬೆಳಗ್ಗೆ 5.45ಕ್ಕೆ ಹೊರಟು, ಬೆಳಗ್ಗೆ 5.55ಕ್ಕೆ ಯಶವಂತಪುರ, 9.15ಕ್ಕೆ ದಾವಣಗೆರೆ, 11.30ಕ್ಕೆ ಶ್ರೀ ಸಿದ್ದಾರೂಢ ಸ್ವಾಮೀಜಿ (ಎಸ್‌ಎಸ್ಎಸ್) ಹುಬ್ಬಳ್ಳಿ, ಮಧ್ಯಾಹ್ನ 12.10ಕ್ಕೆ ಧಾರವಾಡ ತಲುಪುತ್ತದೆ.
ಇದನ್ನೂ ಓದಿ :ಜೂ. 27ರಿಂದ ಬೆಂಗಳೂರು - ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭ : ಹೀಗಿದೆ ನೋಡಿ ವೇಳಾಪಟ್ಟಿ