ದಾವಣಗೆರೆ:ಜಿಲ್ಲೆಯ ಇಬ್ಬರು ಮಹಿಳೆಯರು ಇಸ್ರೇಲ್‌ನಲ್ಲಿದ್ದು, ಸುರಕ್ಷಿತವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಮಾಹಿತಿ ನೀಡಿದರು. ಜಿಲ್ಲಾಡಳಿತ ಅವರೊಂದಿಗೆ ಸಂಪರ್ಕದಲ್ಲಿದ್ದು, ಮಾತನಾಡಿ ಧೈರ್ಯ ತುಂಬಲಾಗಿದೆ. ದಾವಣಗೆರೆ ನಗರದ ಕೆಹೆಚ್‌ಬಿ ಕಾಲೊನಿಯ ಹಿಲ್ಡೋ ಮ್ಯಾಂಥೇರೋ, ಜಗಳೂರಿನ ದೊಣ್ಣೆಹಳ್ಳಿ ಗ್ರಾಮದ ಪ್ರಿಯದರ್ಶಿನಿ ಎಂಬಿಬ್ಬರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಹಿಲ್ಡೋ ಮ್ಯಾಂಥೇರೋ ಹೋಮ್ ಟೇಕರ್ ಆಗಿ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಪ್ರಿಯದರ್ಶಿನಿ ಗಾಜಾದಿಂದ ನೂರು ಕಿಲೋಮೀಟರ್ ದೂರದಲ್ಲಿ ಸ್ಟಾಫ್ ನರ್ಸ್ ಆಗಿದ್ದಾರೆ. ಅವರ ಕುಟುಂಬಸ್ಥರು ಕೂಡ ಜಿಲ್ಲಾಧಿಕಾರಿ ಕಚೇರಿಯ ಸಂಪರ್ಕದಲ್ಲಿದ್ದು, ಜಿಲ್ಲಾಡಳಿತ ಸಹಾಯ ನೀಡಲಿದೆ ಎಂದರು.
ದಾವಣಗೆರೆಯಲ್ಲಿ ಪಟಾಕಿ ಅಂಗಡಿ ಪರಿಶೀಲನೆ:ಬೆಂಗಳೂರಿನ ಅತ್ತಿಬೆಲೆ ಪಟಾಕಿ ದುರಂತದಿಂದ ಎಚ್ಚೆತ್ತುಕೊಂಡಿರುವ ಸರ್ಕಾರ, ಕಟ್ಟುನಿಟ್ಟಾದ ನಿಯಮಗಳನ್ನು ಜಾರಿ ಮಾಡಿದೆ. ಹೀಗಾಗಿ ಜಿಲ್ಲೆಯಲ್ಲೂ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಎಸಿ ಅಧ್ಯಕ್ಷತೆಯಲ್ಲಿ ಪಟಾಕಿ ಅಂಗಡಿಗಳ ಪರಿಶೀಲನೆ ಮಾಡಿ ವರದಿ ಕೋರಲಾಗಿದೆ ಎಂದು ಡಿಸಿ ತಿಳಿಸಿದರು.