ಕರ್ನಾಟಕ

karnataka

ETV Bharat / state

ದಾವಣಗೆರೆ: ಧಾರಾಕಾರ ಮಳೆಗೆ ಕೊಚ್ಚಿಹೋದ ಸೇತುವೆ; ಹಳ್ಳ-ಕೊಳ್ಳಗಳು ಭರ್ತಿ

ದಾವಣಗೆರೆ ಜಿಲ್ಲೆಯ ಹಲವೆಡೆ ಸುರಿದ ಭಾರಿ ಮಳೆಗೆ ಹಳ್ಳ-ಕೊಳ್ಳಗಳು ಭರ್ತಿಯಾಗಿವೆ. ಅಲ್ಲಲ್ಲಿ ಸೇತುವೆಗಳು ಕೊಚ್ಚಿಹೋಗಿದ್ದರಿಂದ ಹತ್ತಾರು ಗ್ರಾಮಗಳು ಸಂಪರ್ಕವನ್ನು ಕಳೆದುಕೊಂಡಿವೆ. ವಿದ್ಯುತ್ ಕಂಬಗಳು ಕೂಡ ಧರೆಗುರುಳಿದ್ದರಿಂದ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ.

Torrential rain in Davanagere district
Torrential rain in Davanagere district

By

Published : Jul 23, 2021, 5:05 PM IST

ದಾವಣಗೆರೆ:ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಜಡಿಮಳೆಗೆ ಜನ ಹೈರಾಣಾಗಿದ್ದು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹಲವೆಡೆ ನೀರು ನುಗ್ಗಿದ ಪರಿಣಾಮ ಭಾರೀ ಹಾನಿಯಾದ ವರದಿಯಾಗಿದೆ.

ಇನ್ನು ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆಯಿಂದ ಹಲವಡೆ ಸೇತುವೆಗಳು ಕೊಚ್ಚಿಕೊಂಡು ಹೋಗಿವೆ. ಹತ್ತಾರು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಹಳ್ಳ-ಕೊಳ್ಳಗಳು ಭರ್ತಿಯಾಗಿ ತುಂಬಿ ಹರಿಯುತ್ತಿದ್ದು ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿದೆ.

ಹರಿಹರ ತಾಲೂಕಿನಲ್ಲಿ ಪರಿಶೀಲನೆಯಲ್ಲಿ ಡಿಸಿ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್

ಹರಿಹರ ತಾಲೂಕಿನ ಕೊಂಡಜ್ಜಿ, ಸಾರಥಿ, ಚಿಕ್ಕಬಿದರಿ ಗ್ರಾಮಗಳ ಸೇತುವೆ ಮಳೆಯಿಂದಾಗಿ ಕೊಂಚಿಕೊಂಡು ಹೋಗಿದ್ದು, ಸಂಪರ್ಕ ಇಲ್ಲದಂತಾಗಿದೆ. ಚನ್ನಗಿರಿ ತಾಲೂಕಿನ ಹೊನ್ನಮರದ ಹಳ್ಳಿ ಹಾಗೂ ಕಾಕನೂರು ಬಳಿ ಇರುವ ಹಿರೇಹಳ್ಳ ಬೃಹತ್ ನೀರಿನಿಂದ ತುಂಬಿ ಹರಿಯುತ್ತಿದ್ದು, ಜನರ ಸಂಚಾರ ಸ್ಥಗಿತಗೊಂಡಿದೆ.

ಇದಲ್ಲದೆ ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಹ ಕೊಚ್ಚಿ ಹೋಗಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಧಾರಾಕಾರ ಮಳೆಗೆ ದಾವಣಗೆರೆಯಲ್ಲಿ ಕೊಚ್ಚಿಹೋದ ಸೇತುವೆ

ಗಾಳಿ ಸಹಿತ‌ ಭಾರೀ ಮಳೆಗೆ ಕುಸಿದ ಮನೆ; ಮಹಿಳೆ ಪ್ರಾಣಾಪಾಯದಿಂದ ಪಾರು

ಗಾಳಿ ಸಹಿತ ಭಾರೀ ಮಳೆಗೆ ಮನೆಯೊಂದು ಕುಸಿದಿದೆ. ಮಹಿಳೆಯೊಬ್ಬಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚನ್ನಗಿರಿ ಪಟ್ಟಣದ ಲಷ್ಕರ್ ಮೊಹಲ್ಲಾದಲ್ಲಿ ಜರುಗಿದೆ. ಇದಲ್ಲದೆ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳು ಕೂಡ ಧರೆಗುರುಳಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಲಷ್ಕರ್ ಮೊಹಲ್ಲಾದ ನಿವಾಸಿ ನಸೀಮ್ ಉನ್ನಿಸ್​ ಎಂಬುವರಿಗೆ ಸೇರಿದ ಮನೆ ಕುಸಿದಿದ್ದು ಯಾವುದೇ ಜೀವ ಹಾನಿಯಾಗಿಲ್ಲ. ಇನ್ನು ಮಹಿಳೆಯ ನೆರವಿಗೆ ಪುರಸಭೆಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಚನ್ನಗಿರಿಯಲ್ಲಿ ಕುಸಿದ ಮನೆ

ABOUT THE AUTHOR

...view details