ದಾವಣಗೆರೆ: ರಾಜ್ಯದ ಹಲವೆಡೆ ಟೊಮೆಟೊ ಬೆಲೆಯಲ್ಲಿ ಏಕಾಏಕಿ ಏರಿಕೆ ಕಂಡಿದೆ. ಪ್ರತಿ ಕೆಜಿಗೆ 20 ರಿಂದ 30 ರೂಪಾಯಿಗೆ ದೊರೆಯುತ್ತಿದ್ದ ಟೊಮೆಟೊ ಇಂದು 100 ರೂಪಾಯಿಗೆ ಏರಿಕೆ ಕಂಡಿದೆ. ಜಿಲ್ಲೆಯಲ್ಲೂ ಟೊಮಟೊ ದರ ಗಗನಕ್ಕೇರಿದ್ದು ಗ್ರಾಹಕರು ಟೊಮೆಟೊ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ತರಕಾರಿ ಬೆಲೆ ಹೆಚ್ಚಳವಾಗಿರುವುದು ಗ್ರಾಹಕರ ಜೇಬಿಗೆ ಹೊರೆಯಾಗಿ ಪರಿಣಮಿಸಿದೆ. ಆಹಾರ ಧಾನ್ಯಗಳ ಬೆಲೆ ಹೆಚ್ಚಳವಾಗಿರುವ ಬೆನ್ನಲ್ಲೇ ತರಕಾರಿ ದರ ಹೆಚ್ಚಳವಾಗಿರುವುದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಗಗನಕ್ಕೇರಿದ ಟೊಮೆಟೊ ಬೆಲೆ :ಸರಿಯಾದ ಸಮಯಕ್ಕೆ ಮಳೆ ಬಾರದ ಹಿನ್ನೆಲೆ ಟೊಮೆಟೊ ದರ ಹೆಚ್ಚಾಗಿದೆ. ಇದಲ್ಲದೆ ದಾವಣಗೆರೆಗೆ ಅಕ್ಕಪಕ್ಕ ತಾಲೂಕು, ಜಿಲ್ಲೆಗಳಿಂದ ಸರಿಯಾಗಿ ಟೊಮೆಟೊ ಪೂರೈಕೆಯಾಗದ ಕಾರಣ ಬೆಲೆ ಹೆಚ್ಚಳ ಉಂಟಾಗಿದೆ ಎಂದು ಹೇಳಲಾಗಿದೆ. ಜಿಲ್ಲೆಯಲ್ಲಿ ಬೆಳೆದ ಟೊಮೆಟೊ ಅಕ್ಕಪಕ್ಕದ ರಾಜ್ಯಗಳಿಗೆ ಹೋಗುತ್ತಿರುವುದರಿಂದಲೂ ಇಲ್ಲಿ ಸರಿಯಾದ ಪೂರೈಕೆ ಇಲ್ಲದೆ ಬೆಲೆ ಏರಿಕೆ ಉಂಟಾಗಿದೆ ಎಂದು ತರಕಾರಿ ಮಾರಾಟಗಾರರು ಹೇಳುತ್ತಾರೆ. ಟೊಮೆಟೊ ಬೆಲೆ ಚಿಲ್ಲರೆ ವ್ಯಾಪಾರಿಗಳಲ್ಲಿ 80 ರಿಂದ 90 ರೂಪಾಯಿ ಇದ್ದು, ಸಗಟು ವ್ಯಾಪಾರಿಗಳು 60 ರಿಂದ 70 ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ.
ವಿವಿಧ ತರಕಾರಿಗಳ ಬೆಲೆಯನ್ನು ನೋಡುವುದಾದರೆ, ಬೀನ್ಸ್ ಪ್ರತಿ ಕೆಜಿಗೆ 120 ರಿಂದ 150 ರೂ., ಟೊಮ್ಯಾಟೊ ಬೆಲೆ 70ರಿಂದ 80 ರೂ., ಮೆಣಸಿನಕಾಯಿ 120 ರೂ, ಹೀರೆಕಾಯಿ, ಜವಳಿಕಾಯಿ, ಬೆಂಡೆಕಾಯಿ ತಲಾ 60 ರೂ, ಬದನೆಕಾಯಿ 40 ರೂ, ಕ್ಯಾರೆಟ್ 80 ರೂಪಾಯಿಗೆ ಮಾರಾಟವಾಗುತ್ತಿದೆ. ಪ್ರತಿ ಕೆಜಿಗೆ 20 ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೆಟೊ, ಇದೀಗ ಏಕಾಏಕಿ 70 ರಿಂದ 80 ರೂಪಾಯಿಗೆ ಏರಿಕೆಯಾಗಿದೆ. ಇದರಿಂದ ತರಕಾರಿ ಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಸಾಮಾನ್ಯವಾಗಿ ಬೆಳಗಾವಿ, ತಮಿಳುನಾಡಿನ ಊಟಿಯಿಂದ ದಾವಣಗೆರೆಗೆ ತರಕಾರಿ ಆಗಮಿಸುತ್ತದೆ.