ಹರಿಹರ:ಹಿಂದೂ ಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ ಮಹಾನ್ ಪ್ರೇರಕ ಶಕ್ತಿ ಸ್ವಾಮಿ ವಿವೇಕಾನಂದರು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. ನಗರದ ರಾಮಕೃಷ್ಣ ವಿವೇಕಾನಂದಾಶ್ರಮದ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ಇಂತಹ ಮಹಾ ಸಂತರ ಆದರ್ಶ ಮತ್ತು ಚಿಂತನೆಗಳನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸ್ವಾಮಿ ವಿವೇಕಾನಂದರು ನಮ್ಮೆಲ್ಲರಿಗೂ ಪ್ರೇರಣಾಶಕ್ತಿ. ಯುವ ಜನಾಂಗ ದಿನಕ್ಕೆ ಒಂದು ಬಾರಿ ವಿವೇಕಾನಂದರನ್ನು ನೆನಪಿಸಿಕೊಂಡರೆ ಸಾಕು, ಏನು ಬೇಕಾದರೂ ಸಾಧಿಸಬಹುದು ಎಂಬ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ ಎಂದರು. ಕಬ್ಬಿಣದಂತಹ ಮಾಂಸ, ಉಕ್ಕಿನಂತಹ ನರಮಂಡಲ, ಮಿಂಚಿನ ಬುದ್ಧಿ ಶಕ್ತಿ ಹಾಗೂ ಅಪಾರ ಅತ್ಮ ಸ್ಥೈರ್ಯದಿಂದ ಕೂಡಿರುವಂತ ವ್ಯಕ್ತಿಯೇ ನಿಜವಾದ ಯುವ ಶಕ್ತಿ ಎನ್ನುತ್ತಿದ್ದ ಅವರು, ಅಂತಹ 100 ಜನ ಯುವಕರಿದ್ದರೆ ದೇಶದ ಚಿತ್ರಣವನ್ನು ಬದಲಿಸುವ ವಿಶ್ವಾಸ ಹೊಂದಿದ್ದರು ಎಂದರು.
ದೇಶದ ಇಂದಿನ ಯುವ ಪೀಳಿಗೆ ಗಾಂಜಾ ಮತ್ತು ಅಫೀಮ್ಗಿಂತ ಹೆಚ್ಚಿನ ಅಪಾಯಕಾರಿಯಾಗಿರುವ ಮೊಬೈಲ್ ಬಳಕೆಯಿಂದ, ತಮ್ಮ ಅಮೂಲ್ಯವಾದ ಚಿಂತನ ಶಕ್ತಿಯನ್ನು ಕಳೆದುಕೊಂಡು ಅವನತಿಯ ಹಾದಿಯತ್ತ ಸಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸ್ವಾತಂತ್ರ ಹೋರಾಟದಲ್ಲಿ ಯುವಕರು ಪಾಲ್ಗೊಳ್ಳಲು ವಿವೇಕಾನಂದರ ಪ್ರೇರಣೆಯೇ ಮೂಲ ಕಾರಣ. ಧರ್ಮ ಪಾಲನೆ ಎಂದರೆ ಏಕಾಂತದಲ್ಲಿ ಕುಳಿತು ಮಾಡುವ ತಪಸ್ಸಲ್ಲ. ಜನರ ನಡುವೆ ಇದ್ದು ಜನರಿಗಾಗಿ ಸಮಸ್ತ ಶಕ್ತಿಯನ್ನು ವಿನಿಯೋಗಿಸುವುದು ಎಂದು ವಿವೇಕಾನಂದರು ಸಾರಿದ್ದಾರೆ ಎಂದು ಹೇಳಿದರು. ಜಗತ್ತಿಗೆ ಹಿಂದೂ ಧರ್ಮದ ಸಾರವನ್ನು ಸಾರಿದ ಅವರಿಗೆ, ಭಾರತವನ್ನು ವಿಶ್ವಗುರುವನ್ನಾಗಿ ಮಾಡಿದ ಕೀರ್ತಿ ಸಲ್ಲುತ್ತದೆ ಎಂದರು.
ಇನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ವಿದ್ಯಾರ್ಥಿ ತಮ್ಮ ಜೀವನದಲ್ಲಿ ವಿವೇಕಾನಂದ ಅವರಂತಹ ಆದರ್ಶ ವ್ಯಕ್ತಿಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ, ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ಕಿವಿ ಮಾತು ಹೇಳಿದರು. ಸಭೆಯಲ್ಲಿ ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀ ಶಾರದೇಶಾನಂದಜೀ ಮಹಾರಾಜ್, ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ಪೌರಯುಕ್ತೆ ಎಸ್.ಲಕ್ಷ್ಮೀ, ಮಾಜಿ ಶಾಸಕ ಬಿ.ಪಿ. ಹರೀಶ್, ಸಿಪಿಐ ಶಿವಪ್ರಸಾದ್ ಎಂ, ಡಾ. ಶಾರಾದಾದೇವಿ, ಡಾ. ರಾಮಪ್ರಸಾದ, ತುಕಾಮಣಿ ಸಾ. ಬೂತೆ, ಡಾ. ಖಮೀತ್ಕರ್ ಭಾಗಿಯಾಗಿದ್ದರು.