ದಾವಣಗೆರೆ: ಕಾಲೇಜು ಕಾಂಪೌಂಡ್ನಿಂದ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ವಿದ್ಯಾರ್ಥಿನಿಯ ಪೋಷಕರು ಅನುಮಾನಾಸ್ಪದ ಸಾವು ಎಂದು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಳೆದ ಜೂನ್ 18ರ ಭಾನುವಾರ ರಾತ್ರಿ ಜಿಲ್ಲೆಯ ಹರಿಹರ ತಾಲೂಕಿನ ಕುರುಬರಹಳ್ಳಿ ಬಳಿಯ ಮಾನ್ಯತಾ ಪಬ್ಲಿಕ್ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯೋರ್ವಳು ಕಾಂಪೌಂಡ್ ಹತ್ತುವಾಗ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ಗಾಯಗೊಂಡಿದ್ದ ಬಾಲಕಿಯನ್ನು ತಕ್ಷಣ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ಮೃತಳನ್ನು ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ನಿವಾಸಿ ಶಶಿಕಾಂತ್ ಅವರ ಪುತ್ರಿ ಎಂದು ಗುರುತಿಸಲಾಗಿತ್ತು. ಮೃತ ವಿದ್ಯಾರ್ಥಿನಿ ಮಾನ್ಯತಾ ವಸತಿ ಕಾಲೇಜಿನಲ್ಲಿ ಸೈನ್ಸ್ ವಿಭಾಗದ ಪಿಯು ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದಳು.
ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮೃತ ವಿದ್ಯಾರ್ಥಿನಿಯ ತಾಯಿ ಅರ್ಚನಾ, ನಾವು ಮಗಳನ್ನು ಶಾಲೆಗೆ ಬಿಡಲು ಬಂದಾಗ ನಮಗೆ ಒಳಗೆ ಬಿಟ್ಟಿರಲಿಲ್ಲ. ಶಾಲೆಯ ನಿಯಮ ಎಂದು ನಾವು ಹೆಚ್ಚು ಒತ್ತಾಯ ಮಾಡಲು ಹೋಗಲಿಲ್ಲ. ಬಳಿಕ ಅಲ್ಲಿಂದ ನಾವು ವಿದ್ಯಾರ್ಥಿನಿಯನ್ನು ಅಲ್ಲೇ ಬಿಟ್ಟು ತೆರಳಿದ್ದೆವು. ಆದಾದ ಬಳಿಕ ಮತ್ತೆ ನಾಲ್ಕು ದಿನ ಕಳೆದು ನಾವು ಮಗಳನ್ನು ನೋಡಲು ಬಂದೆದ್ದೆವು. ನನ್ನ ಮಗಳು ತುಂಬಾ ಧೈರ್ಯವಂತೆ. ಅವಳು ಐದಡಿ ಕಾಂಪೌಂಡ್ ನಿಂದ ಬೀಳುವ ಸಾಧ್ಯತೆ ಇಲ್ಲ. ಅವಳು ಬಿದ್ದಿರುವ ಜಾಗವನ್ನು ಗಮನಿಸಿದರೆ ಅಷ್ಟೊಂದು ಗಂಭೀರವಾಗಿ ಗಾಯಗೊಳ್ಳುವ ಅಥವಾ ಸಾವನ್ನಪ್ಪುವ ಸಾಧ್ಯತೆ ಇಲ್ಲ ಎಂದು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ನನಗೆ ಇಲ್ಲಿ ಇರಲು ಆಗುತ್ತಿಲ್ಲ ಎಂದು ಅವಳು ಶಿಕ್ಷಕರ ಬಳಿ ಹೇಳಿದ್ದಳು. ಅವಾಗಾದರೂ ಶಾಲೆಯವರು ನಮಗೆ ಕರೆ ಮಾಡಿ ತಿಳಿಸಬೇಕಿತ್ತು. ಆದರೆ ಆ ರೀತಿ ಮಾಡಿಲ್ಲ. ಐದು ಅಡಿ ಕಾಂಪೌಂಡ್ನಿಂದ ಬಿದ್ದು ಅವಳು ಸಾಯಲು ಸಾಧ್ಯವೇ ಇಲ್ಲ ಹೇಳಿದರು.