ದಾವಣಗೆರೆ: ಕಳೆದ ವರ್ಷದ ಆರಂಭದಲ್ಲಿ ದೇಶಕ್ಕೆ ಮಹಾಮಾರಿ ಕೊರೊನಾ ಆವರಿಸಿದ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಣೆಯಾಯ್ತು. ಪರಿಣಾಮ, ಪ್ರತೀ ಕ್ಷೇತ್ರಗಳು ಲಾಕ್ ಆಗಿ ತನ್ನ ಕಾರ್ಯಚಟುವಟಿಕೆಯನ್ನು ನಿಲ್ಲಿಸಿದ್ದವು. ಸರ್ಕಾರಿ ಹಾಗು ಖಾಸಗಿ ಶಾಲೆಗಳನ್ನು ಸಹ ಬಂದ್ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಅದಕ್ಕನುಗುಣವಾಗಿ ಆನ್ಲೈನ್ ಕ್ಲಾಸ್ಗಳು, ವಿದ್ಯಾಗಮಗಳಂತಹ ವಿದ್ಯಾರ್ಥಿ ಪೂರಕ ಯೋಜನೆಗಳು ಚುರುಕುಗೊಂಡವು. ಕೊರೊನಾ ಹಂತ ಹಂತವಾಗಿ ಕಡಿಮೆಯಾದ ಬಳಿಕ ಶಾಲೆಗಳನ್ನು ತೆರೆಯಲು ಸರ್ಕಾರ ಹಸಿರು ನಿಶಾನೆ ತೋರಿದ್ದರೂ ಕೂಡ ಖಾಸಗಿ ಶಾಲೆಗಳು ಆರಂಭ ಆಗಲು ತಡವಾದ ಹಿನ್ನೆಲೆ ಮಕ್ಕಳು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ.
ಸರ್ಕಾರಿ ಶಾಲೆಗಳತ್ತ ಮುಖಮಾಡಿದ ವಿದ್ಯಾರ್ಥಿಗಳು.. ಜಿಲ್ಲೆಯ ಖಾಸಗಿ ಶಾಲೆಗಳು:
ಬೆಣ್ಣೆನಗರಿ ದಾವಣಗೆರೆಯಲ್ಲಿ ಖಾಸಗಿ ಶಾಲೆಗಳು ಹೆಚ್ಚಿದ್ದು, ಕೊರೊನಾ ಹಂತವಾಗಿ ಇಳಿಮುಖ ಕಂಡರೂ ಕೂಡ ಖಾಸಗಿ ಶಾಲೆಗಳು ಆರಂಭವಾಗಲು ತಡವಾಗಿವೆ. ದಾವಣಗೆರೆ ನಗರದಲ್ಲಿ 120 ಹಾಗು ಇಡೀ ಜಿಲ್ಲೆಯಲ್ಲಿ 180 ಸೇರಿ ಒಟ್ಟು 300 ಖಾಸಗಿ ಶಾಲೆಗಳಿದ್ದು, ಕೊರೊನಾದಿಂದ ಕಂಗೆಟ್ಟಿವೆ.
ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದು, ಫೀಸ್ ಭರಿಸಲು ಮುಂದಾಗುತ್ತಿಲ್ಲ. ಇದರಿಂದ ಕೆಲ ಖಾಸಗಿ ಶಾಲೆಗಳು ಕಂಗಾಲಾಗಿವೆ. ಜಿಲ್ಲೆಯಲ್ಲಿ ಐದಾರು ಶಾಲೆಗಳು ಆರಂಭವಾಗಿಲ್ಲ. ಉಳಿದ ಶೇ. 99 ರಷ್ಟು ಖಾಸಗಿ ಶಾಲೆಗಳು ಆರಂಭ ಆಗಿದ್ದು, ಮಕ್ಕಳಿಗೆ ಆನ್ಲೈನ್ ಮೂಲಕ ಶಿಕ್ಷಣವನ್ನು ಬೋಧಿಸುತ್ತಿವೆ.
ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳು:
ಖಾಸಗಿ ಶಾಲೆಗಳು ತೆರಯಲು ತಡವಾದ ಹಿನ್ನೆಲೆಯಲ್ಲಿ 2020-21ರ ಸಾಲಿನಲ್ಲಿ ಮೂರ್ನಾಲ್ಕು ಸಾವಿರ ಮಕ್ಕಳು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಖಾಸಗಿ ಶಾಲೆಗಳು ಬಂದ್ ಆಗಿದ್ದ ವೇಳೆ ವಿದ್ಯಾಗಮ ಹಾಗು ವಠಾರ ಶಾಲೆಗಳಿಗೆ ಸರ್ಕಾರ ಅನುಮತಿ ನೀಡಿದ್ದ ಕಾರಣ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯತ್ತ ಮುಖ ಮಾಡಿರುವುದು ಒಂದು ಕಾರಣವಾದರೆ, ಇನ್ನು ಕೆಲ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಫೀಸ್ ಕಟ್ಟಲಾಗದೆ ಆರ್ಥಿಕ ಸಂಕಷ್ಟದಿಂದ ಸರ್ಕಾರಿ ಶಾಲೆಯತ್ತ ಮುಖ ಮಾಡಿದ್ದಾರೆ ಎಂಬ ಅಂಶ ತಿಳಿದುಬಂದಿದೆ.
ಟಿಸಿ ಕೊಡುವಲ್ಲಿ ಖಾಸಗಿ ಶಾಲೆಗಳು ಕಿರಿಕ್ ಮಾಡುತ್ತಿದೆಯೇ?
ಖಾಸಗಿ ಶಾಲೆಯ ಮಕ್ಕಳು ಸರ್ಕಾರಿ ಶಾಲೆಯತ್ತ ಮುಖ ಮಾಡುತ್ತಿರುವ ಬೆನ್ನಲ್ಲೇ ಖಾಸಗಿ ಶಾಲೆಯವರು ಮಕ್ಕಳಿಗೆ ಟಿಸಿ ಕೊಡಲು ಕಿರಿಕ್ ಮಾಡ್ತಿದ್ದಾರೆ ಎಂಬ ಆರೋಪ ಇದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಖಾಸಗಿ ಶಾಲೆಗಳ ಆಡಳಿತ ಮಂಡಲದ ಕಾರ್ಯದರ್ಶಿ ರಾಮ್ ಮೂರ್ತಿ, ಸರ್ಕಾರ ನಿಯಮವನ್ನು ಸಡಿಲಿಕೆ ಮಾಡಿದ್ದ ವೇಳೆಯಲ್ಲಿ ಟಿಸಿ ಕೇಳಿದ್ರೆ ಕೊಡಬಹುದಿತ್ತು. ಅದ್ರೆ ತರಗತಿಗಳು ಆರಂಭ ಆದ ಬಳಿಕ ಟಿಸಿ ಕೊಡಿ ಎಂದು ಕೇಳಿದ್ರೆ ಅದು ಹೇಗೆ ಸಾಧ್ಯ? ಎಂದರು.
ಇದನ್ನೂ ಓದಿ:ಶಾಲಾ - ಕಾಲೇಜುಗಳು ಆರಂಭ.. ಹಾಜರಾತಿ ಪ್ರಮಾಣ ಹೆಚ್ಚಿಸುವತ್ತ ಗಮನ
ಜಿಲ್ಲೆಯಲ್ಲಿ ಶೇ. 99ರಷ್ಟು ಖಾಸಗಿ ಶಾಲೆಗಳು ಆರಂಭ ಆಗಿದ್ದರೂ ಕೂಡ ಕೊರೊನಾ ಸಂಕಷ್ಟದಿಂದ ಹೊರಬರಲಾಗದೆ ಹೈರಾಣಾಗಿವೆ. ಈ ಖಾಸಗಿ ಶಾಲೆಗಳು ಸರಿಯಾದ ಸಮಯಕ್ಕೆ ಆರಂಭವಾಗದೆ ಇದ್ದ ಕಾರಣ ಮಕ್ಕಳು ಸರ್ಕಾರಿ ಶಾಲೆಯತ್ತ ಮುಖ ಮಾಡುತ್ತಿದ್ದಾರೆ.