ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯಗೆ ಸ್ಪರ್ಧೆಗೆ ಕ್ಷೇತ್ರವಿಲ್ಲ, ಅವರು ಪರದೇಶಿ ರೀತಿ ಇದ್ದಂತೆ ಎಂದು ಸಾರಿಗೆ ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ಹಮ್ಮಿಕೊಂಡಿರುವ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು ಈ ರಾಜ್ಯದ ಸಿಎಂ ಆಗಿದ್ದಂತವರು ಸಿದ್ದರಾಮಯ್ಯ ನವರನ್ನು 2018 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನ ಸೋಲಿಸಿದರು.
ಆದರೆ ಬಾದಮಿ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಿ ನನ್ನ ವಿರುದ್ಧ ಕೇವಲ 1600 ಮತಗಳಿಂದ ಜಯಗಳಿಸಿದ್ದರು, 2018 ರಲ್ಲಿ ಸಿಎಂ ಆಗಿದ್ದವರಿಗೆ ಇದೀಗ 2023ಕ್ಕೆ ಕ್ಷೇತ್ರವೇ ಇಲ್ಲದೆ ಅಲೆಯುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ರಾಮುಲು ಟೀಕಿಸಿದರು. ಸಿದ್ದರಾಮಯ್ಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಶಾರ್ಟ್ ಲೀಸ್ಟ್ ಮಾಡಿದ್ದು, ಅದರಲ್ಲಿ ಕೋಲಾರ, ಬಾದಮಿ, ವರುಣ ಕ್ಷೇತ್ರಗಳನ್ನು ಲೀಸ್ಟ್ ಮಾಡಿಕೊಂಡಿದ್ದಾರೆ, ಹುಷಾರ್ ಅವರು ದಾವಣಗೆರೆಗೂ ಬರಬಹುದು ಸ್ಪರ್ಧೆ ಮಾಡಬಹುದು ಎಂದರು.
ಸಿದ್ದರಾಮಯ್ಯ ಹಾಗೂ ಡಿಕೆಶಿಯವರದ್ದು ಬೈಟು ರಾಜಕಾರಣ:ಸಿದ್ದರಾಮಯ್ಯ ಹಾಗೂ ಡಿಕೆಶಿಯವರದ್ದು ಬೈಟು ರಾಜಕಾರಣ, ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಮಾಡುವ ಬದಲು ಡಿಕೆಶಿ ಸಿದ್ದರಾಮಯ್ಯ ಜೋಡುವ ಕೆಲಸ ಮಾಡಬೇಕು. ಹೇಗೆ ನಾವು ಟೀ ಕುಡಿಯುವಾಗ ನಾವು ಬೈಟು ಅನ್ನುತ್ತೆವೋ ಹಾಗೇ ಸಿದ್ದರಾಮಯ್ಯ ಡಿಕೆಶಿಯವರದ್ದು ಬೈಟು ರಾಜಕಾರಣವಾಗಿದೆ ಎಂದರು.
ಸಿದ್ದರಾಮಯ್ಯರು 4೦ ವಿಧಾನಸಭಾ ಕ್ಷೇತ್ರ, ಡಿಕೆಶಿಯವರು 40 ವಿಧಾನಸಭಾ ಕ್ಷೇತ್ರಗಳನ್ನು ಗುತ್ತಿಗೆ ಪಡೆದು ಬೈಟು ಬೈಟು ಮಾಡಿಕೊಂಡು ಪರಸ್ಪರ ಕಚ್ಚಾಡುತ್ತಿದ್ದಾರೆಂದು ಎಂದು ಶ್ರೀರಾಮುಲು ವಾಗ್ದಾಳಿ ನಡೆಸಿದರು.
ಎಸ್ಸಿ, ಎಸ್ಟಿಗೆ ಮೀಸಲಾತಿ ಹೆಚ್ಚಿಸುವ ಗಂಡಸ್ತನ ಸಿಎಂ ಬೊಮ್ಮಾಯಿಯವರಿಗೆ ಮಾತ್ರ ಇದೆ. ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಿಸುವ ಬಗ್ಗೆ ರಕ್ತ ದಲ್ಲಿ ಬರೆದು ಕೊಡುತ್ತೇನೆ ಎಂದು ಹೇಳಿದ್ದೆ. ಅದೇ ರೀತಿ ನಮ್ಮ ಸರ್ಕಾರ ಮೀಸಲಾತಿ ನೀಡಿದೆ. ಜೇನು ಗೂಡಿಗೆ ಕೈ ಹಾಕಿ ಜೇನು ತುಪ್ಪ ಎಸ್ಸಿ ಎಸ್ಟಿಗೆ ಸಿಎಂ ನೀಡಿದ್ದಾರೆಯೇ ಹೊರತು ನಿಮ್ಮ ರೀತಿ ಮೂಗಿಗೆ ತುಪ್ಪ ಸವರಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.