ದಾವಣಗೆರೆ: ಇಸ್ತ್ರಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮಗಳ ಕಿಡ್ನಿ ಶಸ್ತ್ರಚಿಕಿತ್ಸೆಗೆೆ 12.50 ಲಕ್ಷ ರೂಪಾಯಿ ಹಣವನ್ನು ಪುನೀತ್ ರಾಜ್‌ಕುಮಾರ್ ಭರಿಸಿದ್ದರು. ಈ ಬಾಲಕಿ ಪುನೀತ್ ಅವರ ಅಪ್ಪಟ ಅಭಿಮಾನಿಯಾಗಿದ್ದಳು. ಆದರೆ ಇಂದು ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದಾಳೆ. 18 ವರ್ಷ ವಯಸ್ಸಿನ ಬಾಲಕಿಯ ಹೆಸರು ಪ್ರೀತಿ.
ಚನ್ನಗಿರಿ ಪಟ್ಟಣದ ನಿವಾಸಿ ಕುಮಾರ ಹಾಗೂ ಮಂಜುಳಾ ದಂಪತಿಯ ಪುತ್ರಿ ಪ್ರೀತಿ ಚಿಕ್ಕ ವಯಸ್ಸಿನಿಂದಲೇ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಳು. ಒಂದು ಕಿಡ್ನಿ ಅಳವಡಿಸಿದರೆ ಬದುಕಬಹುದು ಎಂದು ವೈದ್ಯರು ತಿಳಿಸಿದ್ದರು. ತಂದೆ ಚನ್ನಗಿರಿ ಪಟ್ಟಣದಲ್ಲಿ ಇಸ್ತ್ರಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದು, ಮಗಳಿಗೆ ಚಿಕಿತ್ಸೆ ಕೊಡಿಸಲಾಗದೆ ಹೈರಾಣಾಗಿ ತಂದೆಯೇ ತನ್ನ ಒಂದು ಕಿಡ್ನಿಯನ್ನು ಪುತ್ರಿಗೆ ಕೊಡಲು ಸಿದ್ಧರಾಗಿದ್ದರು. ಆದರೆ ತಂದೆಯ ಕಿಡ್ನಿಯನ್ನು ಮಗಳಿಗೆ ಕಸಿ ಮಾಡಿಸಲು ಲಕ್ಷಾಂತರ ರೂಪಾಯಿ ಬೇಕಾಗುತ್ತದೆ, ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿಯೇ ಇರಬೇಕಿತ್ತು. ಇದು ಈ ಕುಟುಂಬಕ್ಕೆ ಆಗದ ಕೆಲಸವಾಗಿತ್ತು.
ಈ ವಿಚಾರವನ್ನು ಯಾರೋ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ತಲುಪಿಸಿದ್ದರು. ಪುನೀತ್ ಅವರು ಪೋಷಕರೊಂದಿಗೆ ಬಾಲಕಿಯನ್ನು ಬೆಂಗಳೂರಿಗೆ ಕರೆಸಿಕೊಂಡು ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಖರ್ಚು ಭರಿಸಿದ್ದರು. ಮೂತ್ರಪಿಂಡ ಕಸಿ ನಂತರ ಬಾಲಕಿ ಸಾವಿನ ದವಡೆಯಿಂದ ಹೊರಬಂದಿದ್ದಳು. ತನ್ನನ್ನು ಬದುಕಿಸಿದ್ದ ಪುನೀತ್ ಸಾರ್ ಸಾವನ್ನಪ್ಪಿದರು ಎಂದು ತಿಳಿದ ಬಾಲಕಿ ವಿಪರೀತ ವೇದನೆಯನ್ನೂ ವ್ಯಕ್ತಪಡಿಸುತ್ತಿದ್ದಳು.
ಚನ್ನಗಿರಿಯಲ್ಲಿ ಆರನೇ ತರಗತಿ ಓದುತ್ತಿದ್ದಾಗ ತೀವ್ರ ತಲೆ ನೋವಿನಿಂದ ಬಳಲುತ್ತಿದ್ದಳು. ಸಹಜವಾಗಿ ತಲೆ ನೋವು ಬರುತ್ತದೆ ಎಂದು ಹೇಳಿ ತಲೆನೋವಿಗೆ ಔಷಧಿ ನೀಡಿ ಕುಟುಂಬ ಸದಸ್ಯರು ಸುಮ್ಮನಾಗುತ್ತಿದ್ದರು. ಆದರೆ ತಲೆ ನೋವು ವಿಪರೀತವಾಗುತ್ತಿದ್ದಂತೆ ಹತ್ತಾರು ಕಡೆ ಚಿಕಿತ್ಸೆಗೆ ತೋರಿಸಿದರೂ ನೋವು ಮಾತ್ರ ಕಡಿಮೆಯಾಗುತ್ತಿರಲಿಲ್ಲ. ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತೋರಿಸಿದಾಗ ಪ್ರೀತಿಯ ಎರಡೂ ಕಿಡ್ನಿಗಳು ವಿಫಲವಾಗಿದ್ದು ಗೊತ್ತಾಗಿದೆ. ಬಿಪಿ ಹೆಚ್ಚಾಗಿ ಕಿಡ್ನಿಗಳು ಕೆಲಸ ಮಾಡುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದರು.
ಆ ಬಳಿಕ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿಯೇ ಕಿಡ್ನಿ ಚಿಕಿತ್ಸೆ ಕೊಡಿಸಲಾಯಿತು. ನಂತರ ವಾರದಲ್ಲಿ ಎರಡು ಬಾರಿ ಕಿಡ್ನಿ ಡಯಾಲಿಸಿಸ್ ಮಾಡಿಸಬೇಕೆಂದು ವೈದ್ಯರು ಹೇಳಿದ್ದರು. ಪ್ರತಿ ಡಯಾಲಿಸೀಸ್ಗೆ ನಾಲ್ಕು ಸಾವಿರ ರೂ ಖರ್ಚು ಬರುತ್ತದೆ. ಮಗಳು ನೋವು ಅನುಭವಿಸುವುದನ್ನು ನೋಡಿ ಮರುಗಿದ ತಂದೆ ಮಗಳಿಗೆ ತನ್ನ ಕಿಡ್ನಿಯನ್ನೇ ನೀಡಲು ನಿರ್ಧರಿಸಿದ್ದರು. ಆದರೆ ಅವರ ಕಿಡ್ನಿಯನ್ನು ಮಗಳಿಗೆ ಜೋಡಿಸಲು ಲಕ್ಷಾಂತರ ದುಡ್ಡು ಬೇಕು ಎಂಬ ವಿಚಾರ ತಿಳಿದು ಬೇಸರ ವ್ಯಕ್ತಪಡಿಸಿದ್ದರು.
ನಟ ಪುನೀತ್ ಮಾನವೀಯತೆ: 2017ರ ಮಾರ್ಚ್ ತಿಂಗಳಲ್ಲಿ ಬಾಲಕಿ ಅನಾರೋಗ್ಯದಿಂದ ಬಳಲುತ್ತಿರುವ ವಿಚಾರ ಹೇಗೋ ತಿಳಿದ ನಟ ಪುನೀತ್ ಅವರು ಬಾಲಕಿಯ ಕುಟುಂಬಕ್ಕೆ ಕರೆ ಮಾಡಿ ಆಸ್ಪತ್ರೆಗೆ ಸೇರಿಸಿ ಪೂರ್ತಿ ಚಿಕಿತ್ಸೆ ಮುಗಿಯುವರೆಗೂ ಕುಟುಂಬದ ಖರ್ಚು ವೆಚ್ಚದ ಜೊತೆಗೆ ಆರು ತಿಂಗಳು ಕುಟುಂಬ ಉಳಿಯಲು ಬಾಡಿಗೆ ಮನೆಯ ವ್ಯವಸ್ಥೆಯನ್ನೂ ಮಾಡಿದ್ದರು. ಇದರ ಜೊತೆಗೆ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಬಾಡಿಗೆ ಕಾರ್ ಮಾಡಿಸಿ ಮನೆ ಸೇರುವಂತೆ ಮಾಡಿದ್ದರು.
ಇದನ್ನೂ ಓದಿ:ಚನ್ನಗಿರಿಯಿಂದ ಮಾಡಾಳು ಮಲ್ಲಿಕಾರ್ಜುನ್, ಹೊನ್ನಾಳಿಯಿಂದ ರೇಣುಕಾಚಾರ್ಯ ನಾಮಪತ್ರ