ಕರ್ನಾಟಕ

karnataka

ETV Bharat / state

ದಾವಣಗೆರೆ: ಅಂತ್ಯಕ್ರಿಯೆಗೆ ಸ್ಮಶಾನವಿಲ್ಲವೆಂದು ಗ್ರಾ ಪಂ ಒಳಗೇ ಮೃತದೇಹ ತಂದಿಟ್ಟ ಕುಟುಂಬಸ್ಥರು

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಜಾಗವಿಲ್ಲವೆಂದು ಮೃತರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

ದಾವಣಗೆರೆ
ದಾವಣಗೆರೆ

By ETV Bharat Karnataka Team

Published : Nov 27, 2023, 5:36 PM IST

Updated : Nov 27, 2023, 6:28 PM IST

ಶಾಸಕ ಶಾಂತನಗೌಡ

ದಾವಣಗೆರೆ :ಶವ ಸಂಸ್ಕಾರಕ್ಕೆ ಜಾಗವಿಲ್ಲ ಎಂದು ಆರೋಪಿಸಿ, ಮೃತರ ಕುಟುಂಬಸ್ಥರು ಗ್ರಾಮ ಪಂಚಾಯತಿ ಒಳಗೆ ಶವವಿಟ್ಟು ಪ್ರತಿಭಟನೆ ನಡೆಸಿರುವ ಘಟನೆ ಕಳೆದ ದಿನ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಸವನಹಳ್ಳಿ ಗ್ರಾಮದ ದೊಡ್ಡಪ್ಪ (65) ಮೃತಪಟ್ಟಿದ್ದ ವ್ಯಕ್ತಿ. ಮೃತರ ಕುಟುಂಬಸ್ಥರು ಶವಸಂಸ್ಕಾರ ಮಾಡಲು ನಿಗದಿತ ಸ್ಥಳವಿಲ್ಲವೆಂದು ಮೊದಲಿಗೆ ಗ್ರಾ. ಪಂ ಒಳಗೆ ನುಗ್ಗಿ ಶವ ಇರಿಸಿ ಪ್ರತಿಭಟನೆ ನಡೆಸಿದರು. ಬಳಿಕ ಮತ್ತೆ ಶವವನ್ನು ಗ್ರಾಮ ಪಂಚಾಯ್ತಿಯಿಂದ ಹೊರತಂದಿಟ್ಟು ಸ್ಮಶಾನಕ್ಕಾಗಿ ಆಗ್ರಹಿಸಿದ್ದಾರೆ.

ಈ ಹಿಂದೆ ಗ್ರಾಮದ ಆಚೆ ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನು ಗ್ರಾಮದ ಕೆಲ ಜನರು ಒತ್ತುವರಿ ಮಾಡಿದ್ದಾರೆಂದು ಜನರು ಆರೋಪ ಮಾಡ್ತಿದ್ದಾರೆ. ಇದೀಗ ಶವ ಸಂಸ್ಕಾರ ಮಾಡಲು ಜಾಗ ನೀಡಬೇಕೆಂದು ಒತ್ತಾಯಿಸಿ, ಪಂಚಾಯತಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ದಿನ ಮಧ್ಯರಾತ್ರಿವರೆಗೂ ಶವವನ್ನು ಗ್ರಾಮ ಪಂಚಾಯತಿ ಒಳಗಡೆ ಇಟ್ಟ ಮೃತರ ಕುಂಬಸ್ಥರು ಸ್ಮಶಾನ ಜಾಗವನ್ನು ನಿಗದಿಪಡಿಸಿ, ಅಲ್ಲಿತನಕ ಶವ ಹೊರತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಬಳಿಕ ಸ್ಥಳಕ್ಕೆ ಶಾಸಕ ಶಾಂತನಗೌಡ ಭೇಟಿ ನೀಡಿ, ಸ್ಮಶಾನಕ್ಕೆ ಜಾಗ ಒದಗಿಸುವ ಬಗ್ಗೆ ಭರವಸೆ ನೀಡಿದರು. ಇದಕ್ಕೆ ಜಗ್ಗದ ಗ್ರಾಮಸ್ಥರು ಮೊದಲಿಗೆ ಸ್ಮಶಾನದ ಅವಶ್ಯಕತೆ ಇದೆ, ನಮಗೆ ಸ್ಮಶಾನ ಕಲ್ಪಿಸಿ ಎಂದು ಪಟ್ಟು ಹಿಡಿದರು.

ಈ ವೇಳೆ ಸ್ಥಳಕ್ಕೆ ನ್ಯಾಮತಿ ತಹಶೀಲ್ದಾರ್​ ಗೋವಿಂದಪ್ಪ ಹಾಗೂ ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿದ್ದರು ಕೂಡ ಪ್ರತಿಭಟನೆ ಮಾತ್ರ ಕೈ ಬಿಡಲಿಲ್ಲ. ಬಳಿಕ ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವರೆಗೂ ಶವ ತೆಗೆಯುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಮಧ್ಯರಾತ್ರಿವರೆಗೂ ಗ್ರಾಮ ಪಂಚಾಯಿತಿಯಲ್ಲಿ ಶವವಿಟ್ಟು ಕುಳಿತಿದ್ದರು. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಪ್ರಶಾಂತ್ ಅವರು ಪ್ರತಿಭಟನಾನಿರತರ ಮನವೊಲಿಸುವಲ್ಲಿ ಸಫಲರಾಗಿದ್ದರಿಂದ ಕುಟುಂಬಸ್ಥರು ಶವಸಂಸ್ಕಾರ ಮಾಡಿದರು.

ಶಾಸಕ ಶಾಂತನಗೌಡ ಹೇಳಿದ್ದಿಷ್ಟು:ಈ ವೇಳೆ ಘಟನಾ ಸ್ಥಳಕ್ಕೆ ಧಾವಿಸಿದ ಶಾಸಕ ಶಾಂತನಗೌಡ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಂತರ ಮಾತನಾಡಿದ ಅವರು, ಈಗಾಗಲೇ ಊರಿನ ಹೊರಭಾಗದಲ್ಲಿ ಸ್ಮಶಾನಕ್ಕೆ ಸ್ಥಳ ನಿಗದಿ ಮಾಡಿ ಮಾರ್ಕ್ ಕೂಡ ಮಾಡಿದ್ದೇವೆ. ಆದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿ ಏಕೆ ತಕರಾರು ಮಾಡ್ತಿದ್ದಾರೆ ಎಂದು ಪಂಚಾಯತಿಯಲ್ಲಿ ಕುಳಿತು ಮಾತನಾಡೋಣ. ಸ್ಮಶಾನ ಮಂಜೂರಾಗಲು ಬಹಳ ದಿನಗಳು ಕಳೆದಿವೆ. ಅದು ಏನ್ ಆಗಿದೆ ಎಂದು ತಿಳಿದುಕೊಳ್ಳಲು ನ್ಯಾಮತಿ ತಹಶಿಲ್ದಾರ್ ಹಾಗೂ ಆರ್​ಐಗೂ ಬರಲು ಸೂಚಿಸಿದ್ದೇನೆ. ಅವರು ಬರಲಿ, ನಂತರ ಸ್ಮಶಾನದ ಜಾಗದ ಬಗ್ಗೆ ಚರ್ಚಿಸಿ ಒಂದು ಕ್ರಮ ತೆಗೆದುಕೊಳ್ಳೋಣ ಎಂದು ಹೇಳಿದರು.

ಇದನ್ನೂ ಓದಿ:ಸ್ಮಶಾನವಿಲ್ಲದೆ ಗ್ರಾಮ ಪಂಚಾಯತ್ ಮುಂದೆಯೇ ಶವಸಂಸ್ಕಾರಕ್ಕೆ ಮುಂದಾದ ಗ್ರಾಮಸ್ಥರು..!

Last Updated : Nov 27, 2023, 6:28 PM IST

ABOUT THE AUTHOR

...view details