ದಾವಣಗೆರೆ: ಕಟಾವಿಗೆ ಬಂದಿದ್ದ ಅಡಕೆ ಮತ್ತು ಪಪ್ಪಾಯ ಗಿಡಗಳನ್ನು ರಾತ್ರೋರಾತ್ರಿ ದುಷ್ಕರ್ಮಿಗಳು ಕತ್ತರಿಸಿ ಹಾಕಿದ್ದು, ರೈತ ಕಣ್ಣೀರಿನಲ್ಲಿ ಕೈ ತೊಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾತ್ರೋ ರಾತ್ರಿ ಅಡಕೆ -ಪಪ್ಪಾಯ ಗಿಡಗಳ ಮಾರಣಹೋಮ ಜಿಲ್ಲೆಯ ಬೋರಗೊಂಡನಹಳ್ಳಿ ಗ್ರಾಮದಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಕಳೆದ ರಾತ್ರಿ ಬೆಳೆದು ನಿಂತಿದ್ದ ಸುಮಾರು 1200 ಅಡಕೆ ಗಿಡಗಳು ಹಾಗೂ 1200 ಪಪ್ಪಾಯ ಗಿಡಗಳನ್ನು ಕಡಿದು ಹಾಕಿದ್ದಾರೆ.
ಬೋರಗೊಂಡನಹಳ್ಳಿ ಗ್ರಾಮದ ನಿವಾಸಿ ತಿಪ್ಪೇಸ್ವಾಮಿ ಎಂಬುವವರು ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಅಡಕೆ ಮತ್ತು ಪಪ್ಪಾಯ ಗಿಡಗಳನ್ನು ಬೆಳೆದಿದ್ದರು. ಬೆಳಗ್ಗೆ ತೋಟದ ಕೆಲಸಗಾರರು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕಳೆದ ಮೂರು ವರ್ಷಗಳಿಂದ ಬೆಳೆದಿದ್ದ ಅಡಕೆ ಗಿಡಗಳು ಸಂಪೂರ್ಣ ನಾಶವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಘಟನೆ ಸಂಬಂಧ ತಿಪ್ಪೇಸ್ವಾಮಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಡಕೆ ಮತ್ತು ಪಪ್ಪಾಯ ಗಿಡಗಳ ನಾಶ ಸಂಬಂಧ ಪರಿಹಾರಕ್ಕೆ ಸರ್ಕಾರದ ಬಾಗಿಲು ತಟ್ಟಿದ್ದಾರೆ. ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಆರ್ ಎಲ್ ಜಾಲಪ್ಪ ಸಾವಿನ ವದಂತಿ: ನಮ್ಮ ತಂದೆ ಜೀವಂತವಾಗಿದ್ದಾರೆ.. ಪುತ್ರ ರಾಜೇಂದ್ರ