ದಾವಣಗೆರೆ:ರೈತರ ಬಳಿ ಭತ್ತ ಖರೀದಿಸಿ 37 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ ಎಂದು ಕೆಲ ರೈತರು ಮಾಡಿರುವ ಆರೋಪ ಶುದ್ಧ ಸುಳ್ಳು ಎಂದು ಪ್ರಶಾಂತ್ ಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ದಾವಣಗೆರೆಯಲ್ಲಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಅವರು, 37 ಕೋಟಿ ರೂಪಾಯಿ ಹಣವನ್ನು ರೈತರಿಗೆ ವಂಚನೆ ಮಾಡಲಾಗಿದೆ ಎನ್ನುವ ಸುಳ್ಳು ಸುದ್ದಿಯನ್ನು ಕೆಲವು ರೈತರು ನನ್ನ ವಿರುದ್ಧ ಸಮಾಜದಲ್ಲಿ ಹಬ್ಬಿಸಿದ್ದಾರೆ ಎಂದು ತಿಳಿಸಿದ್ದಾರೆ.
ನನ್ನ ವಿರುದ್ಧ ಕೆಲವರು ಷಡ್ಯಂತ್ರ ಮಾಡಿದ್ದಾರೆ.. ಭತ್ತ ಖರೀದಿಯಲ್ಲಿನ 37 ಕೋಟಿ ರೂ. ವಂಚನೆ ಬಗ್ಗೆ ನ್ಯಾಯಾಲಯಗಳಲ್ಲಿ ಹಾಗೂ ಪೊಲೀಸ್ ಠಾಣೆಗಳಲ್ಲಿ ನನ್ನ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಭತ್ತ ಖರೀದಿಗೆ ಸಂಬಂಧಪಟ್ಟಂತೆ ವಾಸ್ತವವಾಗಿ 6 ಜನ ರೈತರಿಗೆ ಕೊಡಬೇಕಾಗಿದ್ದು ಕೇವಲ 27 ಲಕ್ಷ ರೂ. ಮಾತ್ರ. ಆದರೆ 37 ಕೋಟಿ ರೂ. ಬಾಕಿ ಹಣ ಕೊಡಬೇಕಿದೆ ಎಂದು ನನ್ನ ವಿರುದ್ಧ ಕೆಲವರು ಷಡ್ಯಂತ್ರ ಮಾಡಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
37 ಕೋಟಿ ರೂಪಾಯಿ ವಂಚನೆ ಬಗ್ಗೆ ಪ್ರಸನ್ನ ಕುಮಾರ್, ರೈತ ಮುಖಂಡರಾದ ಮಲ್ಲಶೆಟ್ಟಿ ಹಳ್ಳಿ ಚನ್ನಬಸಪ್ಪ ಹಾಗೂ ಮಾಸಾಡಿ ರಾಜು ಎಂಬ ರೈತರು ತಮ್ಮ ವಿರುದ್ಧ ಸಮಾಜದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿರುವ ಪ್ರಶಾಂತ ಸ್ವಾಮಿ, ಕೋಟಿಗಟ್ಟಲೆ ಬಾಕಿ ಹಣ ಉಳಿಸಿಕೊಳ್ಳಲಾಗಿದೆ ಎನ್ನುವುದು ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.