ದಾವಣಗೆರೆ:ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಜಗಳೂರು ಪ್ರವಾಸ ಕೈಗೊಂಡು ನಿನ್ನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಭೆಗೆ ಹಾಜರಾಗುವ ಮುನ್ನ ತಾಲೂಕಿನ ದೊಣ್ಣೆಹಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ಸಿದ್ದಮ್ಮನಹಳ್ಳಿಯಲ್ಲಿ ನರೇಗಾ ಕೂಲಿ ಕಾರ್ಮಿಕರನ್ನು ಭೇಟಿಯಾಗಿ ಅವರು ಚರ್ಚೆ ನಡೆಸಬೇಕಿತ್ತು. ಆದರೆ, ಸಚಿವರು ಆಗಮಿಸದ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದ ಸಂಜೆಯತನಕ ಕಾದು ಸುಸ್ತಾದ ಕಾರ್ಮಿಕರು ಬಳಿಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕೂಲಿ ಕಾರ್ಮಿಕ ಮಂಜಣ್ಣ, "ನಮಗೆ ಸರಿಯಾಗಿ ಕೂಲಿ ಕೊಡುವುದಿಲ್ಲ. ನಾವು ಹೇಗೆ ಜೀವನ ಮಾಡಬೇಕು?. ಇಂದು ಸಚಿವರು ಬರ್ತಾರೆಂದು ಬೆಳಿಗ್ಗೆಯಿಂದ ಕಾಯಿಸಿದ್ದಾರೆ. ಊಟ, ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ. ವೃದ್ಧರೇ ಹೆಚ್ಚು ಕೆಲಸಕ್ಕೆ ಬಂದಿದ್ದೇವೆ. ಏನಾದರೂ ಹೆಚ್ಚು ಕಡಿಮೆ ಆದರೆ ಏನೂ ಮಾಡುವುದು?. ಸರ್ಕಾರ ಬಡವರಿಗೆ ಅಂತಾ ಏನೂ ಮಾಡಿಲ್ಲ, ಶ್ರೀಮಂತರಿಗೆ ಅನುಕೂಲ ಮಾಡಿಕೊಟ್ಟಿದೆ. ಊಟ, ನೀರಿಲ್ಲದೆ ಕೆಲಸ ಮಾಡುವ ವೇಳೆ ಸಮಸ್ಯೆಯಾದರೆ ಯಾರಿಗೆ ಹೇಳುವುದು?, ಇಲ್ಲಿ ವೈದ್ಯರು ಕೂಡಾ ಇಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.