ಕರ್ನಾಟಕ

karnataka

ETV Bharat / state

ಬೆಸ್ಕಾಂ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಶಾಸಕ - ಹರಿಹರ

ರೈತರಿಗೆ ವಿದ್ಯುತ್ ಟ್ರಾನ್ಸ್​​ಫಾರ್ಮರ್ ಹಾಗೂ ಕಂಬ ವಿತರಿಸುವಲ್ಲಿ ಬೆಸ್ಕಾಂ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆಂದು ಆರೋಪಿಸಿ ಶಾಸಕ ಎಸ್.ರಾಮಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

mla-scolds-bescom-officials
mla-scolds-bescom-officials

By

Published : Feb 29, 2020, 9:17 PM IST

ಹರಿಹರ:ಬೆಸ್ಕಾಂ ಇಇ, ಎಇಇ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ರೈತರಿಗೆ ಮತ್ತು ಸಾರ್ವಜನಿಕರಿಗೆ ಶೋಷಣೆ ಮಾಡುತ್ತಿದ್ದಾರೆಂದು ಗಂಭೀರ ಆರೋಪ ಮಾಡುವ ಮೂಲಕ ಶಾಸಕ ಎಸ್.ರಾಮಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರದ ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಿಂಗಳುಗಟ್ಟಲೆ ಅಲೆದಾಡಿಸಿ ಟಿಸಿ ಕೊಡಲಾಗುತ್ತದೆ. ಹಾಗೆ ಕೊಟ್ಟ ಟಿಸಿಗಳು ಕೆಲವೇ ತಿಂಗಳಲ್ಲಿ ಕೆಟ್ಟು ಹೋಗುತ್ತವೆ. ಕಳಪೆ ಟಿಸಿಗಳನ್ನು ವಿತರಿಸುತ್ತಿದ್ದೀರಿ ಎಂದು ಸಭೆಯಲ್ಲಿದ್ದ ಎಇಇ ರಮೇಶ್ ಸಿ.ಎನ್. ವಿರುದ್ಧ ನೇರ ಆರೋಪ ಮಾಡಿದರು.

ಕೆಡಿಪಿ ಸಭೆ

ಟಿಸಿ ಹಾಗೂ ಕಂಬ ವಿತರಣೆಗೆ ರೈತರನ್ನು ಅಲೆದಾಡಿಸುತ್ತೀರಿ. ನನ್ನ ಬಳಿ ರೈತರು ಗೋಳು ಹೇಳಿಕೊಳ್ಳುತ್ತಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸಲು ನೀವೇಕೆ ಅಡ್ಡಿಯಾಗುತ್ತೀರಿ? ಕಳೆದ ಏಪ್ರಿಲ್​ನಿಂದ 445 ಟಿಸಿಗಳು ಸುಟ್ಟಿವೆ ಎಂದರೆ ಅವುಗಳ ಗುಣಮಟ್ಟ ಹೇಗಿರಬಹುದೆಂದು ಪ್ರಶ್ನಿಸಿದರು.

ರೈತರಿಗೆ ಕಂಬ ಮತ್ತು ಟಿಸಿಗಳನ್ನು ನಿಮ್ಮ ಲಾರಿಯಲ್ಲಿ ಸಾಗಿಸಬೇಕು. ಆದರೆ ರೈತರಿಗೆ ಅವರ ಟ್ರ್ಯಾಕ್ಟರ್‌ಗಳಲ್ಲಿ ಸಾಗಿಸಿಕೊಳ್ಳಲು ಹೇಳುತ್ತೀರಿ. ಇತ್ತೀಚಿಗೆ ಕಂಬ ಸಾಗಿಸುವ ಟ್ರ್ಯಾಕ್ಟರ್ ಅಪಘಾತವಾಗಿ ಅಮಾಯಕ ರೈತನ ಸಾವಾಯಿತು. ಅದಕ್ಕೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದರು.

ಜಿಗಳಿ ಗ್ರಾಪಂ ಪಿಡಿಒ ರವಿ ಮಾತನಾಡಿ, ವಿದ್ಯುತ್ ಸರಬರಾಜಿನಲ್ಲಿ ಏರಿಳಿತದಿಂದ ಗ್ರಾಮದಲ್ಲಿನ ಬೀದಿ ದೀಪಗಳು ಬರ್ನ್ ಆಗುತ್ತಿವೆ. ಸಹಸ್ರಾರು ರೂಪಾಯಿ ವೆಚ್ಚದಲ್ಲಿ ಮತ್ತೆ ಹೊಸ ದೀಪಗಳನ್ನು ಹಾಕಬೇಕಿದೆ. ಇದಕ್ಕೆ ಸದಸ್ಯರಿಂದ ಟೀಕೆ ನಾವು ಎದುರಿಸುತ್ತಿದ್ದೇವೆ ಎಂದರು.

ಇತ್ತೀಚೆಗೆ ಬೀದಿ ದೀಪದ 10 ಲಕ್ಷ ರೂಪಾಯಿ ಮೊತ್ತವನ್ನು ಬಡ್ಡಿಗೆ ಜಮೆ ಮಾಡಿದ್ದೀರಿ. ಬಾಕಿ ಹಾಗೆಯೇ ಉಳಿಸಿದ್ದೀರಿ. ಬೆಸ್ಕಾಂನಿಂದ ತಪ್ಪಾಗಿ ಅಳವಡಿಸಿದ ಕಂಬ, ಲೈನ್ ಶಿಫ್ಟ್ ಮಾಡಲು ಗ್ರಾಪಂನಿಂದ ಶುಲ್ಕ ಪಾವತಿಸಿ ಎನ್ನುತ್ತೀರಿ ಎಂದು ಅಳಲು ತೋಡಿಕೊಂಡರು.

ತಾಪಂ ಅಧ್ಯಕ್ಷೆ ಶ್ರೀದೇವಿ ಮಾತನಾಡಿ, ಒಂದೇ ಲೈಟ್ ಉರಿಸುವ ಭಾಗ್ಯಜ್ಯೋತಿ ಫಲಾನುಭವಿ ಮನೆಗಳಿಗೆ ತಿಂಗಳಿಗೆ 600 ರೂ.ವರೆಗೆ ಬಿಲ್ ಹೇಗೆ ಬರುತ್ತದೆ. ಮೀಟರ್‌ಗಳ ದೋಷವಿರಬೇಕೆಂದು ಹೇಳಿದಾಗ ಎಇಇ ರಮೇಶ್ ಮಾತನಾಡಿ, ಅಂತಹ ಮೀಟರ್‌ಗಳ ಪರೀಕ್ಷೆ ಮಾಡಿಸಲಾಗುವುದು ಎಂದರು.

ABOUT THE AUTHOR

...view details