ದಾವಣಗೆರೆ :ರಾಜ್ಯದಲ್ಲಿ ಎಲ್ಲಿಯೇ ಕೋಮು ಗಲಭೆಗಳಾದರೂ ಅದರ ಹಿಂದೆ ಕಾಂಗ್ರೆಸ್ ಇರುತ್ತದೆ. ಈ ಹಿಂದಿನ ಚಳವಳಿ ಸಂದರ್ಭಗಳನ್ನು ಗಮನಿಸಿದರೂ ಕಾಂಗ್ರೆಸ್ ಕೈವಾಡ ಕಾಣುತ್ತಿದೆ. ಕಾವೇರಿ ಗಲಾಟೆ ಸಂದರ್ಭದಲ್ಲೂ ಚನ್ನಪಟ್ಟಣ, ರಾಮನಗರದಲ್ಲಿ ಗಲಾಟೆ ಮಾಡಿಸಿದವರೂ ಕಾಂಗ್ರೆಸ್ಸಿನವರೇ ಎಂದು ಕಂದಾಯ ಸಚಿವ ಆರ್.ಅಶೋಕ್ ಆರೋಪಿಸಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆ ವಿಚಾರವನ್ನು ಪ್ರಸ್ತಾಪಿಸಿದರು. ಈ ಹಿಂದಿನ ಘಟನೆಗಳನ್ನು ನೋಡಿದರೆ ನೇರವಾಗಿ ಕಾಂಗ್ರೆಸ್ ಕೈವಾಡ ಕಂಡು ಬರುತ್ತದೆ. ಡಿಜೆಹಳ್ಳಿ, ಕೆಜೆಹಳ್ಳಿ ಗಲಭೆಯ ಬಗ್ಗೆ ನಮಗೇನು ಗೊತ್ತಿಲ್ಲ ಅಂತಾ ಹೇಳಿದ್ದರು. ಆದರೆ, ಅದರ ಹಿಂದೆ ಕಾಂಗ್ರೆಸ್ ಕೈವಾಡ ಇರುವುದು ಸ್ಪಷ್ಟವಾಗಿದೆ. ಹುಬ್ಬಳಿ ಕೋಮು ಗಲಭೆಯಲ್ಲೂ ಕಾಂಗ್ರೆಸ್ ಕೈವಾಡ ಇದೆ. ಗಲಭೆಗಳಲ್ಲಿ ಭಾಗಿಯಾದ ಆರೋಪಿಗಳನ್ನು ವೇದಿಕೆ ಮೇಲೆ ಕಾಂಗ್ರೆಸ್ನವರು ಕೂರಿಸಿಕೊಳ್ಳುತ್ತಾರೆ ಎಂದು ದೂರಿದರು.
ರಾಜ್ಯದಲ್ಲಿ ಎಲ್ಲಿಯೇ ಗಲಭೆಗಳಾದರೂ ಕಾಂಗ್ರೆಸ್ ಕಾರಣ ಎಂದು ಆರೋಪಿಸಿರುವ ಸಚಿವ ಆರ್ ಅಶೋಕ್ ಬಿಜೆಪಿಗೆ ಕೆಟ್ಟ ಹೆಸರು ತರಬೇಕು. ಸಾಮಾಜದಲ್ಲಿ ಕೋಮು ಸೌಹಾರ್ದತೆ ಹಾಳು ಮಾಡಬೇಕೆಂಬುವುದು ಕಾಂಗ್ರೆಸ್ ಹುನ್ನಾರವಾಗಿದೆ. ಮತಗಳ ಓಲೈಕೆಗಾಗಿ ಅಲ್ಪಸಂಖ್ಯಾತರು ಏನೇ ಮಾಡಿದರೂ ಅವರ ಪರವಾಗಿ ನಿಲ್ಲುತ್ತಾರೆ. ಗಲಾಟೆ ಮಾಡಿದವರನ್ನು ಅಮಾಯಕರು ಎನ್ನುತ್ತಾರೆ. ಇವರಿಗೆ ನಮ್ಮ ದೇಶದ ಕಾನೂನು ನಂಬಿಲ್ಲ.
ಪಾಕಿಸ್ತಾನ, ಆಫ್ಘಾನಿಸ್ತಾನದ ಕಾನೂನು ನಂಬುತ್ತಾರೆ. ತಪ್ಪು ಮಾಡಿದವರಿಗೆ ಕಾನೂನು ರೀತಿ ಶಿಕ್ಷೆ ಆಗುತ್ತದೆ. ಹಿಂದೂ ದೇವತೆಗಳ ಮೇಲೆ ಸಾಕಷ್ಟು ಅವಹೇಳನಕಾರಿಯಾಗಿ ಚಿತ್ರಿಸಿದ್ದಾರೆ. ಅದಕ್ಕೆ ಯಾರು ಕೂಡ ಕಾನೂನು ಕೈಗೆ ತೆಗೆದುಕೊಂಡಿಲ್ಲ. ಕಾನೂನು ಕೈಗೆತ್ತಿಕೊಳ್ಳುವವರಿಗೆ ಕಾನೂನಿನ ಮೇಲೆ ಗೌರವ ಇಲ್ಲ ಎಂದರು.
ಸಿದ್ದರಾಮಯ್ಯ-ಹೆಚ್ಡಿಕೆ ಒಂದು ನಾಣ್ಯದ 2 ಮುಖ :ಕಾಂಗ್ರೆಸ್ ನಾಯಕಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಇಬ್ಬರೂ ಕೂಡ ಒಂದು ನಾಣ್ಯದ ಎರಡು ಮುಖಗಳು. ಅವರು ಇಬ್ಬರು ಜೆಡಿಎಸ್‌ನಲ್ಲಿದ್ದವರು. ಅವರು ಇಬ್ಬರು ಸೇರಿ ಸಾಕಷ್ಟು ಸರ್ಕಾರಗಳನ್ನು ಮಾಡಿದ್ದಾರೆ. ಇಬ್ಬರು ಎ ಹಾಗೂ ಬಿ ಟೀಮ್ ಇದ್ದಾಗೆ. ಕುಮಾರಸ್ವಾಮಿ ಅವರನ್ನು ಕರೆತಂದು ಹೊಂದಾಣಿಕೆ ಮಾಡಿ ಸರ್ಕಾರ ಮಾಡಿದ್ದು ಇದೇ ಕಾಂಗ್ರೆಸ್ನವರು ಎಂದು ಟೀಕಿಸಿದರು.
ಏಜೆಂಟ್ ರೀತಿ ಮಾತಾಡುವುದು ಸರಿಯಲ್ಲ:ಸ್ವಾಮೀಜಿ ಆದವರು ಯಾವುದೇ ಒಂದು ಪಕ್ಷದ ಏಜೆಂಟ್ ರೀತಿಯಲ್ಲಿ ಮಾತಾಡುವುದು ಸರಿಯಲ್ಲ ಎಂದು ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಆರ್.ಅಶೋಕ್ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು. ಕಾಗಿನೆಲೆ, ಪೇಜಾವರ ಸ್ವಾಮೀಜಿಗಳಿಗೆ ಸರ್ಕಾರ ಅನುದಾನ ನೀಡಲಾಗಿದೆ. ಯಾರಿಗೂ ಇಲ್ಲದ ಕಮಿಷನ್ ಕಾಟ ಇವರೊಬ್ಬರಿಗೆ ಮಾತ್ರ ಏಕೆ?. ಕನಿಷ್ಟ ಯಾರಿಗೆ ಕಮಿಷನ್ ಕೊಟ್ಟಿದ್ದೀರಾ ಎಂಬುದನ್ನಾದರೂ ಹೇಳಿ. ಈ ರೀತಿ ಸ್ವಾಮೀಜಿಗಳು ರಾಜಕೀಯ ಭಾಷಣ ಮಾಡುವುದು ಸರಿಯಲ್ಲ ಎಂದು ಗರಂ ಆದರು.
ಇದನ್ನೂ ಓದಿ:ಹುಬ್ಬಳ್ಳಿ ಗಲಭೆ ಪ್ರಕರಣ: ನಿಷೇಧಾಜ್ಞೆ ಮುಂದುವರೆಸಿ ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಆದೇಶ