ಗ್ರಾಮಕ್ಕೆ ತೆರಳಿ ಕುಂದುಕೊರತೆ ಆಲಿಸಿದ ಜಿಲ್ಲಾಡಳಿತ ದಾವಣಗೆರೆ:ಬೆಳವನೂರು ಗ್ರಾಮದಲ್ಲಿ ಬುಧವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಆಯಾ ಗ್ರಾಮಸ್ಥರ ಜನರ ಕುಂದುಕೊರತೆ ಆಲಿಸಿ, ಸ್ಥಳದಲ್ಲೇ ಪರಿಹಾರವಾಗುವಂತಹ ಸಮಸ್ಯೆಗಳನ್ನು ಅಲ್ಲೇ ಜಿಲ್ಲಾಡಳಿತದಿಂದ ಬಗೆಹರಿಸಲಾಯಿತು. ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಬದಲು ಅಧಿಕಾರಿಗಳೇ ಮನೆ ಬಾಗಿಲಿಗೆ ಭೇಟಿ ನೀಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಏರ್ಪಡಿಸಲಾದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದ ಪ್ರಯೋಜನವನ್ನು ಗ್ರಾಮಸ್ಥರು ಪಡೆದುಕೊಂಡರು. ಜನಸಾಮಾನ್ಯರು ಸರ್ಕಾರದ ಸೌಲಭ್ಯಗಳಿಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಬೇಕೆಂಬ ಉದ್ದೇಶದಿಂದ ಸರ್ಕಾರ ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಜನತಾ ದರ್ಶನ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಬಗೆಹರಿಸಿ ಪರಿಹಾರ ಕಂಡುಕೊಳ್ಳಲಾಗುತ್ತಿದೆ.
ಗ್ರಾಮಕ್ಕೆ ತೆರಳಿ ಕುಂದುಕೊರತೆ ಆಲಿಸಿದ ಜಿಲ್ಲಾಡಳಿತ ಬೆಳವನೂರು ಗ್ರಾಮದಲ್ಲಿ ನಡೆದ ಜನತಾ ದರ್ಶನಕ್ಕೂ ಮುಂಚಿತವಾಗಿ ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ ಎಲ್ಲರ ಕುಂದುಕೊರತೆಗಳನ್ನು ಆಲಿಸಿ ಇ-ಸ್ವತ್ತಿನ ಸಮಸ್ಯೆ, ಶೌಚಾಲಯ, ಪಿಂಚಣಿ, ಗೃಹಲಕ್ಷ್ಮೀ ಸಮಸ್ಯೆ ಸೇರಿದಂತೆ 442 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದಲ್ಲದೆ ಮನೆ ಯಜಮಾನಿಗೆ ಮಾಸಿಕ ರೂ. 2000 ನೀಡುತ್ತಿದ್ದು, ಹಣ ಬಾರದಿರುವ ಫಲಾನುಭವಿಗಳನ್ನು ಗುರುತಿಸಿ ಶೀಘ್ರವೇ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಲಾಗುತ್ತಿದೆ.
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಿಷ್ಟು:ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಜನರು ಸರ್ಕಾರದ ಸೌಲಭ್ಯಗಳಿಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಬೇಕೆಂದು ಮತ್ತು ಸಣ್ಣ, ಸಣ್ಣ ಸಮಸ್ಯೆಗೂ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದವರೆಗೂ ಅಲೆಯಬೇಕಾದ ಸ್ಥಿತಿಯನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಜನತಾ ದರ್ಶನ ನಡೆಸುತ್ತಿದೆ ಎಂದು ತಿಳಿಸಿದರು.
ಇದರಿಂದ ಜನರ ಸಮಯ, ಖರ್ಚು-ವೆಚ್ಚ ಉಳಿತಾಯವಾಗಿ ಸರ್ಕಾರದ ಬಗ್ಗೆ ವಿಶ್ವಾಸ ಮೂಡುತ್ತದೆ. ಇನ್ನು ಕುಂದುಕೊರತೆಗಳನ್ನು ಆಲಿಸಿ ಇ-ಸ್ವತ್ತಿನ ಸಮಸ್ಯೆ, ಶೌಚಾಲಯ, ಪಿಂಚಣಿ, ಗೃಹಲಕ್ಷ್ಮೀ ಸಮಸ್ಯೆ ಸೇರಿದಂತೆ 442 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಶೀಘ್ರವೇ ಪರಿಹರಿಸಲಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂವಿ ಹೇಳಿದ್ದೇನು? :ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಪ್ರತಿಕ್ರಿಯಿಸಿ, ಈ ಬಾರಿಯ ಜನತಾದರ್ಶನ ಅತ್ಯಂತ ವಿನೂತನವಾದದ್ದು ಹಾಗೂ ವಿಶೇಷತೆ ಹೊಂದಿದೆ. ಕೇವಲ ಕಾರ್ಯಕ್ರಮದಲ್ಲಿ ಅರ್ಜಿಗಳನ್ನು ಸ್ವೀಕರಿಸುತ್ತಿರುವುದಲ್ಲದೇ, ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿನ ಮನೆಗಳಿಗೆ ಭೇಟಿ ನೀಡಿ, ಜನರನ್ನು ಸಂಪರ್ಕಿಸಿ ಅವರ ಸಮಸ್ಯೆಗಳನ್ನು ಆಲಿಸಲಾಗುತ್ತಿದೆ. ಕಂದಾಯ, ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆಹಾರ ಇಲಾಖೆಗೆ ಸಂಬಂಧಿಸಿದಂತೆ ಅನೇಕ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಈಗಾಗಲೇ ಗ್ರಾಮದ ಶೇ 50 ರಷ್ಟು ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ :ಜನತಾ ದರ್ಶನಕ್ಕೆ ಸರ್ಕಾರಿ ಬಸ್ನಲ್ಲಿ ಟಿಕೆಟ್ ಪಡೆದು ಪ್ರಯಾಣಿಸಿದ ಉತ್ತರ ಕನ್ನಡ ಜಿಲ್ಲಾಧಿಕಾರಿ