ದಾವಣಗೆರೆ: ಕೋವಿಡ್ ಸಂದರ್ಭದಲ್ಲಿ ಜನಪರ ಕಾರ್ಯಗಳನ್ನು ಮಾಡುತ್ತಾ ಜನರ ಮೆಚ್ಚುಗೆಗೆ ಪಾತ್ರವಾಗುವ ಜೊತೆಗೆ ಸದಾ ಸುದ್ದಿಯಲ್ಲಿರುವ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಇಂದು ಮತ್ತೊಂದು ಮಾನವೀಯ ಕೆಲಸ ಮಾಡಿದ್ದಾರೆ.
ಅಪಘಾತಕ್ಕೀಡಾದ ಗಾಯಾಳುವಿಗೆ ನೆರವಾಗಿ ಮಾನವೀಯತೆ ಮೆರೆದ ಶಾಸಕ ರೇಣುಕಾಚಾರ್ಯ - Honnali MLA MP Renukacharya help news
ಕುಂದೂರು-ಕುಂಬಳೂರು ಗ್ರಾಮಗಳ ಮಾರ್ಗ ಮಧ್ಯೆ ಬೈಕ್ನಿಂದ ಬಿದ್ದು ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾನವೀಯತೆ ಮೆರೆದಿದ್ದಾರೆ.
ಹೊನ್ನಾಳಿ ತಾಲೂಕಿನ ಕುಂದೂರು-ಕುಂಬಳೂರು ಗ್ರಾಮಗಳ ಮಾರ್ಗ ಮಧ್ಯೆ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ. ಅದೇ ರಸ್ತೆಯಲ್ಲಿ ಕುಂದೂರಿನ ಲಸಿಕೋತ್ಸವ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ರೇಣುಕಾಚಾರ್ಯ, ಅಪಘಾತವಾಗಿರುವುದನ್ನು ಕಂಡು ಗಾಯಾಳುವನ್ನು ತನ್ನ ಬೆಂಗಾವಲು ಪಡೆ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದರು. ಅಷ್ಟೇ ಅಲ್ಲದೆ, ಸವಾರನ ಜೊತೆಗಿದ್ದ ಮಹಿಳೆಗೆ ಧೈರ್ಯ ತುಂಬಿದರು.
ಗಾಯಾಳುವಿಗೆ ಕೂಲಂಬಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಶಾಸಕರ ಈ ಮಾನವೀಯ ಕಾರ್ಯಕ್ಕೆ ಕ್ಷೇತ್ರದಲ್ಲಿ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.