ದಾವಣಗೆರೆ: ಹರಿಹರ ತಾಲೂಕಿನ ಸಾಲುಕಟ್ಟೆ ಗ್ರಾಮ ಪಂಚಾಯಿತಿಯ ಮಹಿಳಾ ಕಂಪ್ಯೂಟರ್ ಆಪರೇಟರ್ಗೆ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ಹಾಗೂ ಇತರೆ ಸದಸ್ಯರು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪಂಚಾಯಿತಿಯಲ್ಲಿ ಪ್ರತಿಮಾ ಎಂಬವರು ಕಳೆದ ಮೂರು ವರ್ಷದಿಂದ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶನಿವಾರ ಕೆಲ ಪಂ. ಸದಸ್ಯರು ಸುಖಾಸುಮ್ಮನೆ ಕಿರುಕುಳ ನೀಡಿರುವುದಾಗಿ ಅವರು ಆರೋಪಿಸಿದ್ದಾರೆ. ಪ್ರತಿಮಾ ಅವರ ಸಂಬಂಧಿಕರು ಪಂಚಾಯಿತಿಗೆ ಆಗಮಿಸಿದಾಗ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ಪ್ರತಿಮಾ ಮಾತನಾಡಿ, "ಕಳೆದ ಮೂರು ವರ್ಷಗಳಿಂದ ಸಿದ್ದಪ್ಪ ಎಂಬವರಿಂದ ನನಗೆ ವಯಕ್ತಿಕವಾಗಿ ಮತ್ತು ಕೆಲಸದಲ್ಲಿ ತೊಂದರೆಯಾಗುತ್ತಿದೆ. ಅವರು ಮಾಡುತ್ತಿದ್ದ ಅಕ್ರಮ ಕೆಲಸಗಳಿಗೆ ನಾನು ಸ್ಪಂದಿಸುತ್ತಿರಲಿಲ್ಲ. ನನ್ನ ಮದುವೆ ನಿಶ್ಚಿತಾರ್ಥವನ್ನೂ ಅವರು ಕೆಡಿಸಿದ್ದಾರೆ. ಕೆಲವು ಹುಡುಗರನ್ನು ಕಳುಹಿಸಿ ನನ್ನ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ. ಅದಕ್ಕೆ ಸಾಕ್ಷ್ಯ ಇಲ್ಲ ಎಂದು ನಾನು ಸುಮ್ಮನಾಗಿದ್ದೆ" ಎಂದರು.
"ನನ್ನ ಜಾಗಕ್ಕೆ ಬೇರೆಯವರನ್ನು ಕರೆದುಕೊಳ್ಳಬೇಕು ಎಂದು ನನಗೆ ತೊಂದರೆ ಕೊಡುತ್ತಿದ್ದಾರೆ. ನರೇಗಾ ಯೋಜನೆ ವಿಚಾರದಲ್ಲಿ ಸಿದ್ದಪ್ಪ ಎಂಬವರು ಭಾಗಿಯಾಗುತ್ತಿದ್ದರು. ನನ್ನನ್ನು ಕೆಲಸದಿಂದ ತೆಗೆಯಬೇಕೆಂದು ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ನನಗೆ ಕಚೇರಿಯಲ್ಲಿ ಆಗುತ್ತಿರುವ ತೊಂದರೆಯ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿದ್ದು, ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದನ್ನು ಪಾಲಿಸುತ್ತೇನೆ. ನಾನು ಭ್ರಷ್ಟಾಚಾರ ಮಾಡಿಲ್ಲ, ಎಲ್ಲಾ ಕೆಲಸವನ್ನು ಸರಿಯಾಗಿ ನಿರ್ವಹಿಸಿದ್ದೇನೆ. ಆದರೂ ಸಿದ್ದಪ್ಪ, ನಾಗರಾಜಪ್ಪ ಹಾಗೂ ಮತ್ತಿತರರು ತೊಂದರೆ ಕೊಡುತ್ತಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದರು.