ದಾವಣಗೆರೆ:30 ಅಡಿ ಆಳದ ಹೊಂಡದಲ್ಲಿ ಬಿದ್ದು ರೈತ ಸಾವನ್ನಪ್ಪಿದ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಜೀನಹಳ್ಳಿ ಗ್ರಾಮದಲ್ಲಿ ನಡೆದಿದೆ.
30 ಅಡಿ ಆಳಕ್ಕೆ ಬಿದ್ದು ರೈತನ ದುರಂತ ಅಂತ್ಯ..! - ದಾವಣಗೆರೆಯಲ್ಲಿ ರೈತ ಸಾವು
ಜೀನಹಳ್ಳಿ ಗ್ರಾಮದ ರೈತ ಕರಿಯಪ್ಪ ಎತ್ತುಗಳನ್ನು ಮೇಯಿಸುವ ವೇಳೆ ಮೂವತ್ತು ಆಳದ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ಜೀನಹಳ್ಳಿ ಗ್ರಾಮದ ರೈತ ಕರಿಯಪ್ಪ ಮೃತಪಟ್ಟವರು. ಈ ಗ್ರಾಮದ ಹೊರವಲಯದಲ್ಲಿರುವ ಕತ್ತಿಗೆ ಗಡಿ ಭಾಗದ ಜಮೀನಿನಲ್ಲಿ ಎತ್ತುಗಳನ್ನು ಮೇಯಿಸಿಕೊಂಡು, ಮೂವತ್ತು ಅಡಿ ಆಳದ ಕಲ್ಲು ಹೊಂಡದಲ್ಲಿ ಎತ್ತುಗಳಿಗೆ ನೀರು ಕುಡಿಸುವಾಗ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವು ಕಂಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದರು.
ಮೃತ ಕರಿಯಪ್ಪ ಅವರಿಗೆ ಪತ್ನಿ ಮಂಜುಳಾ ಹಾಗೂ ಮೂವರು ಹೆಣ್ಣುಮಕ್ಕಳಿದ್ದು, 3 ಎಕರೆ ಒಣ ಜಮೀನು ಬದುಕಿಗೆ ಆಸರೆಯಾಗಿತ್ತು. ಆದ್ರೆ, ಈಗ ಮನೆ ಯಜಮಾನ ಸಾವು ಕಂಡಿರುವುದರಿಂದ ಕುಟುಂಬಸ್ಥರನ್ನು ದುಃಖಕ್ಕೆ ದೂಡಿದೆ. ವಿಷಯ ತಿಳಿದ ತಕ್ಷಣ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ, ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃತನ ಕುಟುಂಬದವರಿಗೆ 5 ಲಕ್ಷ ರೂಪಾಯಿ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.