ದಾವಣಗೆರೆ: ಸಾವರ್ಕರ್ ಜೈಲಿನಲ್ಲಿದ್ದಾಗ ಬ್ರಿಟಿಷರಿಗೆ ನೀವು ಹೇಳಿದಂತೆ ಕೇಳ್ಕೊಂಡು ಇರುತ್ತೇನೆ ಎಂದು ಕ್ಷಮಾಪಣಾ ಪತ್ರ ಬರೆದುಕೊಟ್ಟಿದ್ದರು. ಆರ್ಎಸ್ಎಸ್ ಸಂಸ್ಥಾಪಕ ಹೆಗಡೆವಾರ್ ಹಾಗೂ ಗೋಲ್ವಾಲ್ಕರ್ ಇಬ್ಬರು ಎಂದು ಜೈಲಿಗೆ ಹೋದರಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಆರ್ಆರ್ಎಸ್ ವಿರುದ್ಧ ಕೆಂಡಕಾರಿದರು.
ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿರೋಧಿಸಿ ದಾವಣಗೆರೆಯಲ್ಲಿ ನಡೆದ ಪ್ರತಿಭಟನೆ ಬಳಿಕ ಮಾತನಾಡಿದ ಅವರು, ಹೆಗಡೆವಾರ್, ಗೋಲ್ವಾಲ್ಕರ್ ಇಬ್ಬರು ಕೂಡ ಒಂದು ದೇಶದಲ್ಲಿ ಒಬ್ಬ ನಾಯಕ ಇರಬೇಕು ಎಂದು ಹೇಳುತ್ತಿದ್ದವರು. ಹಿಟ್ಲರ್ ಕೂಡ ಹೇಳುತ್ತಿದ್ದದ್ದು ಇದ್ದನ್ನೇ ಎಂದು ಹೇಳಿದರು.
1925ರಲ್ಲಿ ಆರ್ಎಸ್ಎಸ್ ಸ್ಥಾಪನೆಯಾಗಿದ್ದು, ಅದರ ಸಂಸ್ಥಾಪಕ ಹೆಗಡೆವಾರ್ ಆಗಿದ್ದಾರೆ. 1941ರಲ್ಲಿ ಗೋಲ್ವಲ್ ಕರ್ ಅಧ್ಯಕ್ಷರಾಗಿದ್ದರು. ಆದರೆ, ಇವರಾರು ನಮ್ಮ ದೇಶಕ್ಕೆ ಸ್ವತಂತ್ರ ತಂದು ಕೊಟ್ಟಿಲ್ಲ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ, ಮೌಲಾನ ಅಬ್ದುಲ್ ಆಜಾದ್ 11 ವರ್ಷ ಜೈಲುವಾಸ ಅನುಭವಿಸಿದರು.
ಈ ಆರ್ಎಸ್ಎಸ್ನವರು ಒಬ್ಬರಾದ್ರೂ ದೇಶಕ್ಕಾಗಿ ಹೋರಾಡಿ ಜೈಲಿಗೆ ಹೋಗಿದ್ದಾರಾ?, ಆದರೆ, ಈಗ ಜೈಲಿಗೆ ಹೋದವರು ನೆಹರು ಅವರು ದೇಶಭಕ್ತರಲ್ಲ. ಕ್ಷಮಾಪಣೆ ಪತ್ರ ಬರೆದುಕೊಟ್ಟವರು ದೇಶಭಕ್ತರಾಗಿದ್ದಾರೆ ಅದು ದುರಂತ ಎಂದರು.
ನೀವು ಹೇಳಿದಂತೆ ಕೇಳ್ಕೊಂಡು ಇರುತ್ತೇನೆ ಎಂದು ಬ್ರಿಟಿಷರಿಗೆ ಸಾವರ್ಕರ್ ಕ್ಷಮಾಪಣಾ ಬರೆದುಕೊಟ್ಟಿದ್ರು: ಸಿದ್ದರಾಮಯ್ಯ ಮನೋಸ್ಥೈರ್ಯ ಕುಗ್ಗಿಸಲು ಇಡಿ ಬಳಕೆ:ಈಗಾಗಲೇ ನ್ಯಾಷನಲ್ ಹೆರಾಲ್ಡ್ ಕೇಸ್ ಇತ್ಯರ್ಥವಾಗಿ, ಕೇಸ್ನಲ್ಲಿ ಯಾವ ಸತ್ವವಿಲ್ಲ ಎಂದು ತಿಳಿದಿದು ಬಂದಿದೆ. ಆದರೆ, ಮತ್ತೆ ಸುಳ್ಳು ಮೊಕದ್ದಮೆಗೆ ಜೀವ ಕೊಟ್ಟು ಸೋನಿಯಾ ಗಾಂಧಿ ಅವರಿಗೆ ವಿಚಾರಣೆಗೆ ಕರೆದಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಈ ಕೇಸ್ನಲ್ಲಿ ಎಫ್ಐಆರ್ ಹಾಕಿಲ್ಲ. ಆದರೂ ಸಮನ್ಸ್, ವಾರಂಟ್ ಕೊಡಲು ಬರುತ್ತಾ?. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಮತ್ತೇಕೆ ಸಮನ್ಸ್ ಇಲ್ಲದೇ ದೂರು ಕೊಟ್ಟಿರುವುದು?, ರಾಜಕೀಯ ದ್ವೇಷ, ರಾಜಕೀಯ ಸೇಡಿನಿಂದ ಮೋದಿ ಹೀಗೆ ಮಾಡಿದ್ದಾರೆ. ಸೋನಿಯಾ, ರಾಹುಲ್ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ.
ಕಾನೂನು ಬಾಹಿರವಾಗಿ ಎಫ್ಐಆರ್ ಹಾಕದೇ ಈ ಕೇಸ್ ನಲ್ಲಿ ಕಿರುಕುಳ ನೀಡಿದ್ದೀರಿ. ಮಿಸ್ಟರ್ ಮೋದಿ ಹಾಗು ಶಾರವರೇ ಅಧಿಕಾರ ಶಾಶ್ವತವಲ್ಲ. ಬಹಳ ಅಂದ್ರೆ ಇನ್ನೆರಡು ವರ್ಷ ಅಧಿಕಾರದಲ್ಲಿರಬಹುದು ಬಿಜೆಪಿಗೆ ತಕ್ಕ ಪಾಠ ಜನರು ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಂಟು ವರ್ಷ ಆಯ್ತು ಏನ್ ಮಾಡಿದ್ದೀರಿ:ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ನೀವು ಅಧಿಕಾರಕ್ಕೆ ಬಂದು ಎಂಟು ವರ್ಷ ಆಯ್ತು. ನೀವು ಅಧಿಕಾರಕ್ಕೆ ಬಂದು ಮಾಡಿದ್ದೇನು?. ಜನರು ನೆಮ್ಮದಿಯಾಗಿದ್ದಾರಾ?, ಸಿಲಿಂಡರ್, ಮಂಡಕ್ಕಿ, ಅಕ್ಕಿ, ಮೊಸರು ಮೇಲೆ ಜಿಎಸ್ಟಿ ಹೇರಿ ಬಡವರ ರಕ್ತ ಹೀರುತ್ತಿದ್ದೀರಿ. ನಿಮಗೆ ನಾಚಿಕೆ ಆಗಲ್ವಾ?, 'ಮಿಸ್ಟರ್ ಮೋದಿ ಕಹಾ ಹೈ ಅಚ್ಛೇ ದಿನ್?', 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಎಲ್ಲಿದೆ? ಎಂದು ಪ್ರಶ್ನಿಸಿದರು.
ಎರಡು ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದ್ದೀರಿ. ಸುಳ್ಳು ಹೇಳಲು ಒಂದು ಮಿತಿ ಇರಬೇಕು. ಉದ್ಯೋಗ ಕೊಡಿ ಅಂದರೆ ಪಕೋಡಾ ಮಾರಾಟ ಮಾಡಿ ಅಂತೀರ. ಈಗ ಎಣ್ಣೆನೂ 200 ರೂ. ಆಗಿದೆ ಸ್ವಾಮಿ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಡೀಸೆಲ್ ದರ 46 ರೂ., ಪೆಟ್ರೋಲ್ 68 ರೂ. ಇತ್ತು, ಇದೀಗ ಡೀಸೆಲ್ 90 ರೂ., ಪೆಟ್ರೋಲ್ ಬೆಲೆ 103 ರೂ. ಆಗಿದೆ. 416 ರೂ. ಇದ್ದ ಸಿಲಿಂಡರ್ ಬೆಲೆ 1,100 ಆಗಿದೆ. ಇದೇನಾ ಮೋದಿಯವರೇ ಅಚ್ಛೇದಿನ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಲ್ ಗೇಟ್ಸ್ಗಿಂತ ಅದಾನಿ ಅಂಬಾನಿ ಶ್ರೀಮಂತರಾಗಿದ್ದಾರೆ:ಬಿಲ್ ಗೇಟ್ಸ್ಗಿಂತ ಅದಾನಿ ಅಂಬಾನಿ ಶ್ರೀಮಂತರಾಗಿದ್ದಾರೆ. ಅವರ ಕಾರ್ಪೋರೇಟ್ ಟ್ಯಾಕ್ಸ್ ಶೇ.30 ಇತ್ತು, ಈಗ ಶೇ.20ಕ್ಕೆ ಕಡಿತ ಮಾಡಿ ಸರ್ಕಾರ ಸಹಾಯ ಮಾಡಿದೆ. ಅಲ್ಲದೇ, ಉದ್ಯಮಿಗಳ ಸಾಲ ಮನ್ನಾ ಮಾಡಲಾಗಿದೆ. ಆದರೆ, ಬಡವರಿಗೆ ಈ ಸರ್ಕಾರ ಏನ್ ಮಾಡಿದೆ ಎಂದು ಪ್ರಶ್ನಿಸಿದರು.
ರಾಜ್ಯ ಬಿಜೆಪಿ ಸರ್ಕಾರ ಪಿಎಸ್ಐ ನೇಮಕಾತಿ, ಕೋವಿಡ್ನಲ್ಲಿ ಕೋಟಿಗಟ್ಟಲೆ ಹಣ ಲೂಟಿ ಮಾಡಿದೆ. ಪಿಎಸ್ಐ ಹಗರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಮೃತಪಾಲ್ ಮಾತ್ರವಲ್ಲ ಎಲ್ಲ ಸಚಿವರು ಭಾಗಿಯಾಗಿದ್ದಾರೆ. ನಾನು ಐದು ವರ್ಷ ಮುಖ್ಯಮಂತ್ರಿ ಆಗಿ, 12 ವರ್ಷ ಹಣಕಾಸು ಮಂತ್ರಿಯಾಗಿದ್ದೆ. ಈ ಅವಧಿಯಲ್ಲಿ ನಾನು ಹಣ ತೆಗೆದುಕೊಂಡಿದ್ದಾರೆ ಎಂದು ಸಾಬೀತು ಪಡಿಸಿದರೆ, ನಾನು ಅವತ್ತೇ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
ಇದನ್ನೂ ಓದಿ:ನಾನು ಇರೋವರೆಗೂ ನಿಮ್ಮನ್ನ ಯಾರನ್ನೂ ಸಿಎಂ ಆಗೋಕೆ ಬಿಡೋದಿಲ್ಲ: ಬಿಎಸ್ವೈ