ದಾವಣಗೆರೆ: ನಗರ ಸ್ವಚ್ಛ ಮಾಡುವ ಪೌರಕಾರ್ಮಿಕರು ಸರಿಯಾಗಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಮಹಾನಗರ ಪಾಲಿಕೆಯ ಮೇಯರ್ ಬಿ.ಜಿ.ಅಜಯ್ ಕುಮಾರ್ ಸೂಚನೆ ನೀಡಿದರು.
ಪಾಲಿಕೆಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 45 ವಾರ್ಡ್ಗಳಲ್ಲೂ ಬೆಳಿಗ್ಗೆ 6 ರಿಂದ 11 ರವರೆಗೆ ಹಾಗೂ ಮಧ್ಯಾಹ್ನ 2 ರಿಂದ 5 ರವರೆಗೆ ಕೆಲಸ ನಿರ್ವಹಿಸಲು ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಹೇಳಿದರು.
ಪಾಲಿಕೆಯ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಮಾತನಾಡಿ, ಭೌಗೋಳಿಕವಾಗಿ ಹೆಚ್ಚುವರಿ ಪೌರಕಾರ್ಮಿಕರ ಹುದ್ದೆ ತುಂಬಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈಗಾಗಲೇ 317 ಖಾಯಂ ಹಾಗೂ 200 ಗುತ್ತಿಗೆ ಪೌರ ಕಾರ್ಮಿಕರಿದ್ದಾರೆ. ಮೊದಲು ಇವರಿಂದ ಸರಿಯಾಗಿ ಕೆಲಸ ಮಾಡಿಸಿ, ಬಳಿಕ ತೀರ್ಮಾನ ಕೈಗೊಂಡು ಹೊಸದಾಗಿ ಪ್ರಸ್ತಾವನೆ ಸಲ್ಲಿಸಿ ಎಂದರು.
ಪಾಲಿಕೆ ಸದಸ್ಯ ಉದಯ್ ಮಾತನಾಡಿ, ಪೌರಕಾರ್ಮಿಕರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಸ್ವಚ್ಛತೆ ಬಗ್ಗೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಪೂರ್ತಿ ಪ್ರಮಾಣದಲ್ಲಿ ಪೌರ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಿ. ಜೊತೆಗೆ ಹೊರಗುತ್ತಿಗೆಯ ದಫೇದಾರ್ ಅವರನ್ನು ಪೌರಕಾರ್ಮಿಕರನ್ನಾಗಿಸಿ ಕೆಲಸಕ್ಕೆ ನೇಮಿಸಿ ಎಂದು ಹೇಳಿದರು.
ಪೌರಕಾರ್ಮಿಕರು ಸರಿಯಾಗಿ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಮೇಯರ್ ಸೂಚನೆ ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಪೌರಕಾರ್ಮಿಕರು ಕೆಲಸಕ್ಕೆ ಬಾರದೆ ಸಂಬಳ ತೆಗೆದುಕೊಳ್ಳುತ್ತಿರುವ ಹಾಗೂ ಧಮ್ಕಿ ಹಾಕಿ ಹಾಜರಿ ಹಾಕಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ತರಹದ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಕಂಡು ಬಂದರೆ ವಜಾ ಮಾಡುವುದು ಶತಸಿದ್ಧ. ಈ ಹಿನ್ನೆಲೆಯಲ್ಲಿ ನಗರವನ್ನು ಸ್ವಚ್ಛವಾಗಿಡಲು ಪೌರ ಕಾರ್ಮಿಕರಿಗೆ ಸಮಯ ನಿಗದಿ ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮೈಸೂರು ಜಿಲ್ಲೆಯಂತೆ ದಾವಣಗೆರೆ ಜಿಲ್ಲೆಯನ್ನು ನಂಬರ್ ಒನ್ ಸ್ವಚ್ಛ ನಗರವಾಗಿಸಲು ಎಲ್ಲರೂ ಸಹಕರಿಸಬೇಕು. ಮುಂದಿನ ದಿನಗಳಲ್ಲಿ ನಗರದ ಸ್ವಚ್ಛತೆಯ ಸಲುವಾಗಿ ವಿಶೇಷ ಸಭೆ ನಡೆಸೋಣ ಎಂದರು. ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಮಾತನಾಡಿ, ಪೌರ ಕಾರ್ಮಿಕರಿಗಾಗಿ ಬಯೋಮೆಟ್ರಿಕ್ ಅಳವಡಿಸಲಾಗಿದೆ. ದಫೇದಾರ್ ಆಗಿರುವವರನ್ನು ಪೌರ ಕಾರ್ಮಿಕರನ್ನಾಗಿ ಕೆಲಸ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ಮಾತನಾಡಿ, 2019-20 ನೇ ಸಾಲಿನಲ್ಲಿ ಕೇವಲ ಶೇ.20ರಷ್ಟು ಬಾಡಿಗೆ ವಸೂಲಿಯಾಗಿದೆ. 2.14 ಕೋಟಿ ರೂಪಾಯಿ ಬಾಡಿಗೆ ಬರುವುದು ಬಾಕಿ ಇದೆ. ಮಳಿಗೆ ಬಾಡಿಗೆದಾರರರು ಸರಿಯಾಗಿ ಬಾಡಿಗೆ ಕಟ್ಟದೆ ಪಾಲಿಕೆಗೆ ನಷ್ಟವಾಗಿದೆ. 505 ಮಳಿಗೆಗಳಿದ್ದು, ಅದರಲ್ಲಿ ಇದೀಗ 340 ಮಳಿಗೆಗಳ ಕರಾರು ಮುಗಿದಿದೆ. ಈ ಹಿನ್ನೆಲೆಯಲ್ಲಿ ಮರು ಹರಾಜು ಮಾಡುವ ಮೂಲಕ ಹೊಸಬರಿಗೆ ಅವಕಾಶ ನೀಡೋಣ ಎಂದು ತಿಳಿಸಿದರು. ಪಾಲಿಕೆ ಸದಸ್ಯೆ ಆಶಾ ಮಾತನಾಡಿ, ಸ್ಮಶಾನಕ್ಕೆ ಹೋದಾಗ ಗುಂಡಿ ತೆಗೆಯಲು 4 ರಿಂದ 5 ಸಾವಿರ ಹಣ ಕೇಳುತ್ತಿದ್ದು, ಈ ಬಗ್ಗೆ ಕ್ರಮ ವಹಿಸಬೇಕು ಎಂದರು.
ಪಾಲಿಕೆ ಸದಸ್ಯ ನಾಗರಾಜ ಮಾತನಾಡಿ, ಕಾರ್ಪೋರೇಶನ್ ವತಿಯಿಂದ ಒಂದು ದರ ನಿಗದಿಪಡಿಸಿ. ಅದಕ್ಕಾಗಿ ಒಂದು ಜೆಸಿಬಿ ಮೀಸಲಿಡಬೇಕು ಎಂದರು. ಇದಕ್ಕಿ ಪ್ರತಿಕ್ರಯಿಸಿದ ಮೇಯರ್, ಮೊದಲಿನಿಂದಲೂ ಈ ವಿಷಯ ಗಮನಕ್ಕೆ ಬಂದಿದೆ. ರುದ್ರಭೂಮಿಗೆ ಈಗಾಗಲೇ 2 ಜೆಸಿಬಿ ಮೀಸಲಿಡಲಾಗಿದೆ. 500 ರೂ. ನಿಗದಿಪಡಿಸಿದ್ದು, ಜೆಸಿಬಿ ಗುಂಡಿ ತೆಗೆದು ಮುಚ್ಚುವ ಕೆಲಸ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.