ದಾವಣಗೆರೆ: ಬೆಣ್ಣೆ ನಗರಿಯಲ್ಲಿ ದೊಡ್ಡಮ್ಮ ದೇವಿ ಕರಗ ಜರುಗಿತು. ಈ ಜಾತ್ರೆಯಲ್ಲಿ ಭಕ್ತ ಗಣ ಕಟ್ಟಿಕೊಂಡ ಹರಕೆಗಳನ್ನು ತೀರಿಸುವುದು ಅಚ್ಚರಿ. ಇಷ್ಟಾರ್ಥಗಳು ಈಡೇರಿದರೆ ಭಕ್ತರು ದೊಡ್ಡಮ್ಮ ದೇವಿಗೆ ವಿಶೇಷವಾಗಿ ತಮ್ಮ ಹರಕೆಗಳನ್ನು ತೀರಿಸುತ್ತಾರೆ. ದೇವಿಯ ಪವಾಡದಿಂದ ಸಾಕಷ್ಟು ಮಂದಿಗೆ ಒಳ್ಳೆಯದಾಗಿದೆ. ಸಮಸ್ಯೆ, ಸಂಕಷ್ಟಗಳು ದೂರ ಮಾಡುತ್ತಾ ಜನರನ್ನು ಕಾಯುತ್ತಿದ್ದಾಳೆ ಎಂಬುದು ಜನರ ನಂಬಿಕೆ.
ದಾವಣಗೆರೆ ನಗರ ದೇವತೆ ದುರ್ಗಾಂಬಿಕ ದೇವಿ ಹೇಗೋ ಹಾಗೆ ಈ ದೊಡ್ಡಮ್ಮ ದೇವಿ ಕೂಡ ಪವಾಡ ಪ್ರಸಿದ್ಧಿ. ನಗರದ ಭರತ್ ಕಾಲೋನಿಯಲ್ಲಿ ನೆಲೆಸಿರುವ ದೊಡ್ಡಮ್ಮ ದೇವಿ ಕಷ್ಟ ಅಂತಾ ಬರುವ ಭಕ್ತರನ್ನು ಕೈ ಹಿಡಿದು ಕಾಪಾಡುತ್ತಾಳೆ. ಜನರ ಸಮಸ್ಯೆಗಳನ್ನು ದೂರ ಮಾಡುತ್ತಾಳೆ ಎಂಬ ನಂಬಿಕೆಯಿದೆ. ದಾವಣಗೆರೆ ನಗರದ ಭರತ್ ಕಾಲೋನಿ ಹಾಗೂ ಚಿಕ್ಕನಹಳ್ಳಿಯಲ್ಲಿ ವರ್ಷಕ್ಕೊಮ್ಮೆ ಈ ಜಾತ್ರೆ ಜರುಗುತ್ತದೆ. ಸುಮಾರು 70 ರಿಂದ 80 ವರ್ಷಗಳಿಂದ ಈ ಜಾತ್ರಾ ಮಹೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ದೇವಿಯ ಪವಾಡ ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿ ಹೆಸರುವಾಸಿ.
ದೇಹದಂಡನೆಯೊಂದಿಗೆ ಭಕ್ತಿಯ ಪರಾಕಾಷ್ಠೆ:ದೊಡ್ಡಮ್ಮ ದೇವಿ ಬಳಿ ಕಷ್ಟ ಅಂತಾ ಬಂದು ಹರಕೆ ಕಟ್ಟಿಕೊಂಡರೆ, ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ. ತಮ್ಮ ಇಷ್ಟಾರ್ಥಗಳು ಈಡೇರಿದರೆ ಬೆನ್ನಿಗೆ ಹುಕ್ ಹಾಕಿಕೊಂಡು ದೇವಿ ಫೋಟೋ ಇರುವ ಚಕ್ಕಡಿ ಎಳೆಯುವುದು, ಕಾರು ಎಳೆಯುವುದು, ಬಾಯಿಗೆ, ನಾಲಿಗೆಗೆ ತ್ರಿಶೂಲ ಚುಚ್ಚಿಕೊಳ್ಳುವುದು, ಮೈ, ಕೈ, ಹೊಟ್ಟೆ ಭಾಗಕ್ಕೆ ತ್ರಿಶೂಲ ಚುಚ್ಚಿಕೊಳ್ಳುವ ಮೂಲಕ ಭಕ್ತರು ಹರಕೆಯನ್ನು ತೀರಿಸುತ್ತಾರೆ.
"ಈ ಜಾತ್ರೆಯನ್ನು ಕಳೆದ 80 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಅಹಿತಕರ ಘಟನೆ ನಡೆದಿರುವ ಉದಾಹರಣೆ ಇಲ್ಲ. ತ್ರಿಶೂಲದಿಂದ ಚುಚ್ಚಿಕೊಂಡರು ಕೂಡ ಒಂದು ಹನಿ ರಕ್ತ ಬರುವುದಿಲ್ಲ. ಹರಕೆ ಕಟ್ಟಿಕೊಂಡ ಜನರು ತಮ್ಮ ಇಷ್ಟಾರ್ಥಗಳು ಈಡೇರಿದ ತಕ್ಷಣ ಬಂದು ಹರಕೆ ತೀರಿಸುತ್ತಾರೆ. ಇಲ್ಲಿಗೆ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರ, ಮುಂಬೈ ಸೇರಿದಂತೆ ನಾನಾ ಭಾಗದಿಂದ ಭಕ್ತರು ಆಗಮಿಸುತ್ತಾರೆ"- ದೇವಾಲಯ ಕಮಿಟಿಯ ಪ್ರಧಾನ ಕಾರ್ಯದರ್ಶಿ ಸುರೇಶ್.