ಕರ್ನಾಟಕ

karnataka

ETV Bharat / state

ಯೌವ್ವನಾವಸ್ಥೆಗೆ ಬಂದ ಪುತ್ರಿ ಬಗ್ಗೆ ತಂದೆ ಅನುಮಾನ ಪಟ್ಟಿದ್ದೇಕೆ? ಇದು 'ಸೂಳೆಕೆರೆ'ಯ ರೋಚಕ ಸ್ಟೋರಿ

ಸೂಳೆಕೆರೆ ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಕೆರೆ. ಆಂಧ್ರ ಪ್ರದೇಶದ ಕಂಭಕೆರೆ ಹೊರತುಪಡಿಸಿದರೆ ದಕ್ಷಿಣ ಭಾರತದ ಎರಡನೆಯ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆಯನ್ನೂ ಇದು ಹೊಂದಿದೆ. ಜೊತೆಗೆ ಕರ್ನಾಟಕದಲ್ಲಿ ಪ್ರಾಚೀನ ತಂತ್ರಜ್ಞಾನ ಬಳಸಿ ರೂಪಿಸಿರುವ ಈ ಕೆರೆ ನಿರ್ಮಾಣದ ಹಿಂದಿದೆ ಒಂದು ರೋಚಕ ಕಥೆ.

By

Published : Jun 6, 2019, 6:50 PM IST

Updated : Jun 6, 2019, 7:38 PM IST

ಸೂಳೆಕೆರೆ ಇತಿಹಾಸ

ದಾವಣಗೆರೆ :ಚನ್ನಗಿರಿ ತಾಲೂಕಿನ ಸೂಳೆಕೆರೆಗೆ ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆ ಇದೆ. ಆಂಧ್ರ ಪ್ರದೇಶದ ಕಂಭಕೆರೆ ಹೊರತುಪಡಿಸಿದರೆ ದಕ್ಷಿಣ ಭಾರತದ 2ನೇಯ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆಯನ್ನೂ ಇದು ಹೊಂದಿದೆ. ಪ್ರಾಚೀನ ತಂತ್ರಜ್ಞಾನ ಬಳಸಿ ರೂಪಿಸಿರುವ ಈ ಕೆರೆ ನಿರ್ಮಾಣದ ಹಿಂದಿದೆ ಒಂದು ರೋಚಕ ಕಥೆ.

ಈ ಕೆರೆ ಸುಮಾರು 15 ರಿಂದ 20 ಹಳ್ಳಿಗಳ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಿದೆ. ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರನ್ನು ಇಲ್ಲಿಂದ ಪೂರೈಸಲಾಗುತ್ತಿದೆ. ಲಕ್ಷಾಂತರ ಮಂದಿ ಈ ಕೆರೆಯನ್ನು ನಂಬಿಕೊಂಡೇ ಇಂದಿಗೂ ಜೀವನ ಸಾಗಿಸುತ್ತಿದ್ದಾರೆ. ಚನ್ನಗಿರಿ ತಾಲೂಕಿನ ರೈತರ ಪಾಲಿಗೆ ಈ ಜಲಾಗಾರ ಆಧಾರ ಎಂದರೆ ತಪ್ಪಾಗದು. ಇಷ್ಟು ಮಾತ್ರವಲ್ಲ, ಪ್ರವಾಸಿಗರ ಫೇವರಿಟ್ ತಾಣ ಕೂಡಾ ಇದಾಗಿದೆ.

ಸೂಳೆಕೆರೆ ಇತಿಹಾಸ

ಈ ಕೆರೆಗೆ 'ಸೂಳೆಕೆರೆ' ಅನ್ನೋ ಹೆಸರು ಬಂದಿದ್ದೇಗೆ?

ಸೂಳೆಕೆರೆ ನಿರ್ಮಾಣದ ಹಿಂದೆ ಅಚ್ಚರಿ ಸಂಗತಿ ಇದೆ. ಈ ಪ್ರದೇಶದಲ್ಲಿ ಈ ಹಿಂದೆ ಸ್ವರ್ಗವತಿ ಎಂಬ ಪಟ್ಟಣ ಇತ್ತೆಂದು ಇತಿಹಾಸ ಹೇಳುತ್ತದೆ. ಈ ಪಟ್ಟಣವನ್ನು ಆಳ್ವಿಕೆ ನಡೆಸುತ್ತಿದ್ದ ವಿಕ್ರಮರಾಯ ಮತ್ತು ಆತನ ಪತ್ನಿ ನೂತನಾದೇವಿಗೆ ಶಾಂತಲಾದೇವಿ ಎಂಬ ಒಬ್ಬಳೇ ಮಗಳು. ಈಕೆಯನ್ನು ಶಾಂತಮ್ಮ ಎಂದೂ ಕರೆಯುತ್ತಿದ್ದರು. ಈಕೆ ಯೌವ್ವನಾವಸ್ಥೆಗೆ ಬಂದಾಗ ತಂದೆಯ ಅನುಮತಿ ಪಡೆಯದೆ ಪಕ್ಕದ ಊರಿಗೆ ಯಾವುದೋ ಕೆಲಸಕ್ಕೆ ಅಂತ ತೆರಳಿ ವಾಪಾಸು ಅರಮನೆಗೆ ಬರುವಾಗ ಆಕೆಯ ನಡವಳಿಕೆಯಲ್ಲಿ ವ್ಯತ್ಯಾಸವಾಗಿತ್ತಂತೆ. ಈ ಬೆಳವಣಿಗೆಗೆ ತಂದೆ ವಿಕ್ರಮರಾಯ ಆಕ್ಷೇಪಿಸಿ ಶಾಂತಮ್ಮಳನ್ನ ನಿಂದಿಸಿ, ನಡತೆಗೆಟ್ಟ ನೀನು ಸೂಳೆ ಎಂದು ಬೈಯುತ್ತಾನಂತೆ.

ತಂದೆ ಬೈಗುಳದಿಂದ ಬೇಸತ್ತ ಶಾಂತಮ್ಮ ಆರೋಪದಿಂದ ಮುಕ್ತಳಾಗಲು ಕೆರೆ ನಿರ್ಮಾಣಕ್ಕೆ ಸಂಕಲ್ಪ ಮಾಡುತ್ತಾಳೆ. ಸ್ವರ್ಗವತಿ ಪಟ್ಟಣದ ವೇಶ್ಯೆಯರು ವಾಸಿಸುತ್ತಿದ್ದ ಪ್ರದೇಶ ಕೆರೆ ನಿರ್ಮಾಣಕ್ಕೆ ಸೂಕ್ತ ಎಂಬ ನಿರ್ಧಾರಕ್ಕೆ ಬಂದು, ಆ ಜಾಗ ಬಿಟ್ಟುಕೊಡುವಂತೆ ವೇಶ್ಯೆಯರಲ್ಲಿ ಶಾಂತಲಾದೇವಿ ಮನವಿ ಮಾಡ್ತಾಳೆ. ಅಲ್ಲಿ ವಾಸಿಸುತ್ತಿದ್ದ ವೇಶ್ಯೆಯರು ಒಪ್ಪಿ ಒಂದು ಷರತ್ತು ಹಾಕ್ತಾರೆ. ಈ ಕೆರೆಗೆ ಸೂಳೆಕೆರೆ ಎಂಬ ಹೆಸರಿಟ್ಟರೆ ಜಾಗ ಬಿಟ್ಟುಕೊಡುವುದಾಗಿ ಹೇಳಿದಾಗ ಇದಕ್ಕೆ ಒಪ್ಪಿ ರಾಜಪುತ್ರಿ ಇಲ್ಲಿ ಕೆರೆ ನಿರ್ಮಾಣ ಮಾಡಲು ಮುಂದಾಗಿ, ಕೆರೆ ನಿರ್ಮಿಸಿಯೇ ಬಿಡುತ್ತಾಳೆ. ಬಳಿಕ ಈ ಕೆರೆಗೆ ಸೂಳೆಕೆರೆ ಎಂದು ನಾಮಕರಣ ಮಾಡಲಾಯಿತು ಎಂದು ಇತಿಹಾಸ ಹೇಳುತ್ತದೆ. ಇಲ್ಲಿನ ಜನರಿಗೆ, ವೇಶ್ಯೆ ಒಬ್ಬ ಶುಭ್ರ ಮನಸ್ಸಿನ ಶ್ರೇಷ್ಠಳು, ತ್ಯಾಗ ಸಂಕೇತ ಸಮಾನಳೆಂಬ ಪೂಜ್ಯ ಭಾವನೆ ಇದೆ.

ಈ ಕೆರೆಯ ಮರುನಾಮಕರಣಕ್ಕೆ ಜೆ. ಹೆಚ್. ಪಟೇಲ್ ಒಪ್ಪಲಿಲ್ಲ

ಸೂಳೆಕೆರೆ ಎಂಬ ಹೆಸರಿನ ಈ ಕೆರೆಯನ್ನು ಶಾಂತಿಸಾಗರ ಎಂದು ಪುನರ್‌ ನಾಮಕರಣ ಮಾಡಲು ಆಗಿನ ಸಿಎಂ ಜೆ.ಹೆಚ್. ಪಟೇಲರು ಒಪ್ಪಿರಲಿಲ್ಲ. ಇದಕ್ಕೆ ಕಾರಣ ಶಾಂತಮ್ಮ ಓರ್ವ ಹೆಣ್ಣು.ಆಕೆ ಕಟ್ಟಿಸಿದ ಕೆರೆ ಲಕ್ಷಾಂತರ ಮಂದಿಗೆ ಉಪಯೋಗವಾಗಿದೆ. ಆ ಹೆಸರು ಹಾಗೆಯೇ ಇರಬೇಕು ಎಂದು ಪಟೇಲರು ಅಭಿಪ್ರಾಯಪಟ್ಟಿದ್ದರು. ಸರ್ಕಾರಿ ದಾಖಲೆಗಳಲ್ಲಿ ಈ ಕೆರೆಯ ಹೆಸರು ಶಾಂತಿಸಾಗರ ಅಂತ ಇದ್ದರೂ, ಜನ ಸಾಮಾನ್ಯರ ಬಾಯಲ್ಲಿ ಮಾತ್ರ ಸೂಳೆಕೆರೆಯಾಗಿಯೇ ಉಳಿದಿದೆ.

ಸೂಳೆಕೆರೆ ವಿಸ್ತಾರ ಮತ್ತು ವೈಶಿಷ್ಟ್ಯತೆ ಏನು?

ಹಿರೇಹಳ್ಳದ ಎರಡು ಗುಡ್ಡಗಳ ಮಧ್ಯೆ ಬೃಹತ್ ಒಡ್ಡು ಹಾಕಿ ನೀರು ನಿಲ್ಲಿಸಿರುವ ಈ ಕೆರೆ ಸುತ್ತಳತೆ 65 ಕಿಲೋಮೀಟರ್. ಅಚ್ಚುಕಟ್ಟು ಪ್ರದೇಶ ಎರಡು ಸಾವಿರ ಹೆಕ್ಟೇರ್​ ಇದೆ. ಇಷ್ಟು ವಿಸ್ತಾರದ ಕೆರೆ ನೋಡುಗರ ಕಣ್ಣಿಗೆ ಸಾಗರದಂತೆ ಕಾಣುತ್ತದೆ. ಎರಡು ಬೆಟ್ಟಗಳ ನಡುವೆ ಸುಮಾರು 950 ಅಡಿ ಉದ್ದದ ಏರಿ ನಿರ್ಮಾಣ ಮಾಡಿ ನೀರು ನಿಲ್ಲಿಸಲಾಗಿದೆ. ಏರಿಯ ಅಗಲ ಒಂದೆಡೆ 60 ಅಡಿಯಾದ್ರೆ, ಇನ್ನೊಂದೆಡೆ 80 ಅಡಿಗಳಷ್ಟಿದೆ. ವಿಸ್ತಾರವಾದ ಬೆಟ್ಟ ಸಾಲುಗಳ ಪ್ರದೇಶದಲ್ಲಿ ಕೆರೆ ಇದೆ. ಸುತ್ತಲಿನ ನೂರಾರು ಹಳ್ಳಿಗಳಲ್ಲಿ ಬೀಳುವ ಮಳೆ ನೀರು ಈ ಕೆರೆಗೆ ಬಂದು ಸೇರುತ್ತದೆ.

ಹಳೆ ಮೈಸೂರು ರಾಜ್ಯದ ಬ್ರಿಟಿಷ್ ಇಂಜಿನಿಯರ್ ಸ್ಯಾಂಕಿ, ಈ ಪ್ರದೇಶ ಕೆರೆ ನಿರ್ಮಾಣಕ್ಕೆ ಸೂಕ್ತವಲ್ಲ ಎಂದು ಹೇಳಿದ್ದರೂ, ಹಿಂದಿನ ಕಾಲದ ನೀರಾವರಿ ತಂತ್ರಜ್ಞರ ಚಾಣಾಕ್ಷತನದಿಂದ ಈ ಕೆರೆ ನಿರ್ಮಾಣ ಮಾಡಲಾಗಿತ್ತು. ಬಳಿಕ ಇದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದರಂತೆ ಸ್ಯಾಂಕಿ. ಕೆರೆಯ ಉತ್ತರದಲ್ಲಿ ಸಿದ್ಧನ ತೂಬು ಹಾಗೂ ಬಸವ ತೂಬು ಎಂಬ ಎರಡು ನಾಲೆಗಳಿವೆ. ಈ ಮೂಲಕ ನೀರು ಹರಿಸಲಾಗುತ್ತದೆ.

ಕೆರೆ ಅಭಿವೃದ್ಧಿಗೆ ಸರ್ಕಾರದ ನೆರವು ಬೇಕು

ಸೂಳೆಕೆರೆ ರೈತರ ಜಮೀನುಗಳಿಗೆ ನೀರು ಒದಗಿಸಲು ನಿರ್ಮಾಣ ಮಾಡಲಾಗಿದೆ. ಕುಡಿಯುವ ನೀರು, ಕೃಷಿಗೆ ನೀರಾವರಿ ಸೌಲಭ್ಯಕ್ಕಾಗಿ ಕೆರೆ ಮೇಲೆ ಅವಲಂಬನೆಯೂ ಹೆಚ್ಚಾಗುತ್ತಿದೆ. ಆದ್ರೆ, ಇಲ್ಲಿನ ಸಾವಿರಾರು ರೈತರಿಗೆ ನೀರು ಸಿಗುತ್ತಿಲ್ಲ. ಕೆರೆಯ ಗೇಟ್​ಗಳು ಮುರಿದು ಹೋಗಿದ್ದರೂ, ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಾಲೆಯ ಕೊನೆಯ ಭಾಗದ ರೈತರಿಗೆ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Last Updated : Jun 6, 2019, 7:38 PM IST

ABOUT THE AUTHOR

...view details