ಕರ್ನಾಟಕ

karnataka

ETV Bharat / state

ದೇವದಾಸಿ ಪದ್ದತಿ ಜೀವಂತ? ಯುವತಿ ಮದುವೆ ಮಾಡಿಸಿ ಮುಕ್ತಿ ಕೊಟ್ಟ ಅಧಿಕಾರಿಗಳು! - ದೇವದಾಸಿ ಪದ್ದತಿ

ದಾವಣಗೆರೆಯ ಹರಪನಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ಪೋಷಕರೇ ಯುವತಿಯನ್ನು ದೇವದಾಸಿ ಪದ್ಧತಿಗೆ ನೂಕಿರುವ ಆರೋಪ ಕೇಳಿ ಬಂದಿದೆ. ಈ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪೋಷಕರ ಮನವೊಲಿಸಿ, ಯುವತಿಗೆ ಮದುವೆ ಮಾಡಿಸುವ ಮೂಲಕ ಆಕೆಯ ಬಾಳಿಗೆ ಬೆಳಕಾಗಿದ್ದಾರೆ.

ದೇವದಾಸಿ ಪದ್ಧತಿ ಇನ್ನೂ ಜೀವಂತ

By

Published : Sep 4, 2019, 11:35 AM IST

ದಾವಣಗೆರೆ:ಆಧುನಿಕತೆ ಎಷ್ಟೇ ಬೆಳೆದರೂ ನಮ್ಮಲ್ಲಿ ದೇವದಾಸಿ ಪದ್ಧತಿ ಇನ್ನೂ ಜೀವಂತವಾಗಿದೆಯೇ ಎಂಬ ಸಂದೇಹ ಮೂಡುತ್ತಿದೆ. ಇಲ್ಲೊಬ್ಬ ಯುವತಿಯನ್ನು ಪೋಷಕರು ದೇವದಾಸಿ ಎಂಬ ಅನಿಷ್ಟ ಪದ್ಧತಿಗೆ ನೂಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆ ಹರಪನಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದ್ದು ಅಧಿಕಾರಿಗಳು ಸಕಾಲದಲ್ಲಿ ಮಧ್ಯಪ್ರವೇಶಿಸಿದ್ದಾರೆ.

ಈ ಕುರಿತು ಮಾಧ್ಯಮಗಳು ವರದಿ ಪ್ರಸಾರ ಮಾಡಿದ ಹಿನ್ನೆಲೆ ಎಚ್ಚೆತ್ತ ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಪೋಷಕರ ಮನವೊಲಿಸಿದ್ದಾರೆ. ಬಳಿಕ ಯುವತಿಗೆ ಮದುವೆ ಮಾಡಿಸುವ ಮೂಲಕ ಆಕೆಯ ಬಾಳಿಗೆ ಬೆಳಕಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಗ್ರಾಮದ ಯುವತಿಗೆ ಆಕೆಯ ಪೋಷಕರು ಮುತ್ತು ಕಟ್ಟಿ ಆಕೆಯನ್ನು ದೇವದಾಸಿ ಎಂಬ ಅನಿಷ್ಟ ಪದ್ಧತಿಗೆ ನೂಕಿದ್ದರು ಎನ್ನುವ ಆರೋಪವಿದೆ. ಈ ವಿಚಾರ ತಿಳಿದು ದೇವದಾಸಿ ವಿಮೋಚನಾ ಸಂಘ ಸೇರಿದಂತೆ ವಿವಿಧ ಸಂಘಟನೆ ಮುಖಂಡರು ಯುವತಿ ಮನೆಗೆ ಭೇಟಿ ನೀಡಿ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದರು.

ದೇವದಾಸಿ ಪದ್ಧತಿ ಇನ್ನೂ ಜೀವಂತ

ಘಟನೆಯ ಬಗ್ಗೆ ಮಾಹಿತಿ ಪಡೆದು ಹರಪ್ಪನಹಳ್ಳಿ ತಹಶೀಲ್ದಾರ್, ಯುವತಿಯ ಪೋಷಕರ ಮನವೊಲಿಸಿ, ಆಕೆಯ ಸಂಬಂಧಿಕರೊಂದಿಗೆ ಗ್ರಾಮದ ದೇವಾಲಯದಲ್ಲಿ ಆಕೆಗೆ ಮದುವೆ ಮಾಡಿಸುವ ಮೂಲಕ ದೇವದಾಸಿ ಪದ್ಧತಿಯಿಂದ ಯುವತಿಗೆ ಮುಕ್ತಿ ಕೊಡಿಸಿದ್ದಾರೆ.

ಗ್ರಾಮಕ್ಕೆ ಆಗಮಿಸಿದ ತಹಶೀಲ್ದಾರ್, ಯುವತಿಯ ಮನೆಯವರಿಗೆ ಕಾನೂನು ಕ್ರಮಗಳ ಬಗ್ಗೆ ತಿಳಿಹೇಳಿದ್ದಾರೆ. ಜೊತೆಗೆ ಅರಸೀಕೆರೆ ಪೊಲೀಸರು ಸಹ ಕಾನೂನು ಕ್ರಮದ ಬಗ್ಗೆ ಅರಿವು ಮೂಡಿಸಿದ್ದಾರೆ. ಇದಾದ ಬಳಿಕ ಯುವತಿಯನ್ನು ಆಕೆಯ ಸಂಬಂಧಿ ಜೊತೆ ಗ್ರಾಮದ ದೇವಾಲಯದಲ್ಲಿ ಮದುವೆ ಮಾಡಿಸಲಾಗಿದೆ. ಗ್ರಾಮದಲ್ಲಿ ಇನ್ನು ಮುಂದೆ ಈ ರೀತಿಯ ಪದ್ಧತಿಗಳು ಜರುಗದಂತೆ ಕ್ರಮ ಕೈಗೊಳ್ಳುತ್ತೇವೆ. ಅಷ್ಟೇ ಅಲ್ಲದೇ, ಎಚ್ಚರಿಕೆ ವಹಿಸುವ ಮೂಲಕ ಅನಿಷ್ಟ ಪದ್ಧತಿ ದೂರ ಮಾಡುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.

ABOUT THE AUTHOR

...view details