ದಾವಣಗೆರೆ: ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಅಶ್ವತಿ ವಿರುದ್ಧ ಮಾದರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಆಕ್ರೋಶ ವ್ಯಕ್ತಪಡಿಸಿದೆ.
ಸಿದ್ಧ ಶೌಚಾಲಯಗಳ ನಿರ್ಮಾಣ ಮಾಡಿರುವ ಹನ್ನೆರಡು ಲಕ್ಷ ರೂಪಾಯಿ ಬಿಡುಗಡೆ ಮಾಡಲು ವಿಳಂಬ ನೀತಿ ಅನುಸರಿಸಿದ್ದಾರೆ. ಕೇವಲ ಪ್ರಚಾರಕ್ಕಷ್ಟೇ ನಮ್ಮ ಸಂಸ್ಥೆ ಸಹಾಯ ಪಡೆದಿದ್ದಾರೆ. ಹಣ ಬಿಡುಗಡೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಅಶ್ವತಿ ಕ್ರಮ ಕೈಗೊಳ್ಳಲಿಲ್ಲ ಎಂದು ಸಂಸ್ಥೆ ಆರೋಪಿಸಿದೆ.
ಸಂಸ್ಥೆಯಿಂದ ಸಿದ್ಧಪಡಿಸಿದ ಶೌಚಾಲಯಗಳ ಪೈಕಿ 66 ಸಿದ್ಧ ಶೌಚಾಲಯಗಳ ಪ್ರೋತ್ಸಾಹ ಧನ ಪಾವತಿಸಿಲ್ಲ. ವರ್ಗಾವಣೆಗೆ ಮುನ್ನ ಸಿಇಒ ಅಶ್ವತಿಗೆ ಮನವಿ ಸಲ್ಲಿಸಿದಾಗ ಹಣ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ಕೊಟ್ಟಿದ್ದರು. ಕೇವಲ ಪ್ರಚಾರಕ್ಕಾಗಿ, ಪ್ರಶಸ್ತಿ ಪಡೆಯುವ ಸಲುವಾಗಿ ನಮ್ಮ ಸಂಸ್ಥೆಯನ್ನು ಅಶ್ವತಿ ಬಳಸಿಕೊಂಡಿದ್ದಾರೆ ಎಂದು ಸಂಸ್ಥೆಯ ಸದಸ್ಯ ಶ್ರೀನಿವಾಸ್ ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದ್ದಾರೆ.