ಕರ್ನಾಟಕ

karnataka

ETV Bharat / state

ಹಂದಿಗಳ ಹಾವಳಿಗೆ ಕಡಿವಾಣ ಹಾಕಲು ವರಾಹ ಶಾಲೆ ತೆರೆದ ಪಾಲಿಕೆ : ಗ್ರಾಮಸ್ಥರ ಭಾರಿ ವಿರೋಧ

ದಾವಣಗೆರೆ ತಾಲೂಕಿನ ಹೊಸಹಳ್ಳಿ ಹೊರವಲಯದಲ್ಲಿ ವರಾಹ ಶಾಲೆಯನ್ನು ಪಾಲಿಕೆಯಿಂದ ನಿರ್ಮಾಣ ಮಾಡಲಾಗಿದೆ.

ವರಾಹ ಶಾಲೆ
ವರಾಹ ಶಾಲೆ

By

Published : May 23, 2023, 11:06 PM IST

Updated : May 24, 2023, 10:25 AM IST

ವರಾಹ ಶಾಲೆ ನಿರ್ಮಾಣಕ್ಕೆ ಗ್ರಾಮಸ್ಥರ ಭಾರೀ ವಿರೋಧ

ದಾವಣಗೆರೆ : ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಒಂದು ಗೋಶಾಲೆ ಇದ್ದೇ ಇರುತ್ತದೆ. ಅಲ್ಲಿ ಗೋವುಗಳ ಅರೈಕೆ ಮಾಡಲಾಗುತ್ತದೆ. ಆದರೆ ದಾವಣಗೆರೆ ಜಿಲ್ಲೆಯಲ್ಲಿ ಮಾತ್ರ ಸ್ವಲ್ಪ ಡಿಫರೆಂಟ್ ಎಂಬಂತೆ ಪಾಲಿಕೆಯಿಂದ ವರಾಹ (ಹಂದಿ) ಶಾಲೆ ನಿರ್ಮಾಣ ಮಾಡಲಾಗಿದೆ. ನಗರದಲ್ಲಿ ಹಂದಿಗಳ ಉಪಟಳ ಮುಂದುವರೆದಿದ್ದು ಇದಕ್ಕೆ ಕಡಿವಾಣ ಹಾಕಲು ಮಹಾನಗರ ಪಾಲಿಕೆ ಹೆಬ್ಬಾಳ ಬಳಿಯ ಹೊಸಹಳ್ಳಿ ಹೊರವಲಯದಲ್ಲಿ ವರಾಹ ಶಾಲೆ ನಿರ್ಮಾಣ ಮಾಡಿ ಹಂದಿಗಳನ್ನು ಸ್ಥಳಾಂತರ ಮಾಡಲು ಸಿದ್ಧವಾಗಿದೆ.

ದಾವಣಗೆರೆ ಸ್ಮಾರ್ಟ್ ಸಿಟಿ ಆಗಿ ಅಭಿವೃದ್ಧಿ ಹೊಂದಿದೆ. ದುರಂತವೇನೆಂದರೆ ಹಂದಿಗಳನ್ನು ಸ್ಥಳಾಂತರ ಮಾಡುವಲ್ಲಿ ಮಹಾನಗರ ಪಾಲಿಕೆ ಎಡವಿತ್ತು. ಈ ಸಂದರ್ಭದಲ್ಲಿ ಹಂದಿಗಳನ್ನು ಸ್ಥಳಾಂತರ ಮಾಡದಂತೆ ಹಂದಿ ಸಾಕಣೆದಾರರು ಹಾಗೂ ಪಾಲಿಕೆ ನಡುವೆ ಸಾಕಷ್ಟು ಹಗ್ಗಜಗ್ಗಾಟ ನಡೆದಿತ್ತು. ಹಂದಿ ಸಾಕಾಣಿಕೆದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಕೂಡ ಹಂದಿಗಳನ್ನು ಸ್ಥಳಾಂತರ ಮಾಡದಂತೆ ಆದೇಶ ನೀಡಿತ್ತು.

ಆದರೆ ಇದೀಗ ಪಟ್ಟುಬಿಡದ ಪಾಲಿಕೆ ವರಾಹ ಶಾಲೆ ನಿರ್ಮಾಣ ಮಾಡಿದ್ದು, ಕೆಲವೇ ದಿನಗಳಲ್ಲಿ ಸಭೆ ಕರೆದು ಹಂದಿಗಳನ್ನು ಸ್ಥಳಾಂತರ ಮಾಡಲು ಮುಂದಾಗಿದೆ. ಈ ಹಿಂದೆ ಕರೆದಿದ್ದ ಸಭೆಗೆ ಹಂದಿ ಸಾಕಾಣಿಕೆ ಮಾಲೀಕರ‌ ಗೈರಾಗಿದ್ದರು. ಇನ್ನು ಹಂದಿಗಳ ಉಪಟಳಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪಾಲಿಕೆ ಈ ಯೋಜನೆಯನ್ನು ಅಂದಿನ ಮೇಯರ್ ಎಸ್.ಟಿ.ವೀರೇಶ್ ಕೈಗೆತ್ತಿಕೊಂಡಿದ್ದರು. ಹೀಗಾಗಿ ಹೊಸಹಳ್ಳಿ ಹೊರವಲಯದದಲ್ಲಿ ಏಕರೆ ಗೋಮಾಳ ಜಾಗವನ್ನು ಗುರುತಿಸಿ ಅದರಲ್ಲಿ ನಾಲ್ಕು ಎಕರೆಯಲ್ಲಿ ವರಾಹ ಶಾಲೆ ನಿರ್ಮಿಸಲಾಗಿದೆ.

ಹೇಗಿರಲಿದೆ ಗೊತ್ತಾ ವರಾಹ ಶಾಲೆ?:ಇಡೀ ರಾಜ್ಯದಲ್ಲಿ ಎಲ್ಲೂ ಇಲ್ಲದ ವರಾಹ ಶಾಲೆ ದಾವಣಗೆರೆಯಲ್ಲಿ ನಿರ್ಮಾಣವಾಗಿದ್ದು, ಪಾಲಿಕೆ ಅನುದಾನದಲ್ಲಿ 80 ಲಕ್ಷ ವೆಚ್ಚದಲ್ಲಿ ಕಾಮಗಾರಿ ಆರಂಭಿಸಿ ಮುಕ್ತಾಯಗೊಳಿಸಲಾಗಿದೆ.‌ ಒಳಗಿನ ಕಾಮಗಾರಿ ಮಾಡಲು 50-60 ಲಕ್ಷ ಹಣದ ಅವಶ್ಯಕತೆ ಇದ್ದು, ಅದಕ್ಕೂ ಪ್ರಸ್ತಾವನೆ ಕಳುಹಿಸಲಾಗಿದೆ.

ಒಟ್ಟು 7 ಎಕರೆ ಜಾಗದ ಪೈಕಿ 3 ಎಕರೆ ವಿಶಾಲವಾದ ಜಾಗದಲ್ಲಿ 13 ಅಡಿ ಎತ್ತರದ ಕಾಂಪೌಂಡ್ ಹಾಕಿ ಅಲ್ಲಿ ಹಂದಿಗಳನ್ನು ಬಿಡಲಾಗುವುದು. ಹಂದಿ ಮಾಲೀಕರು ಅಲ್ಲಿಗೆ ತೆರಳಲು ರಸ್ತೆ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲು ಲೆಕ್ಕಾಚಾರ ಹಾಕಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ಹಂದಿಗಳಿಗೆ ಆಹಾರ ವ್ಯವಸ್ಥೆಗಾಗಿ ಪಾಲಿಕೆಯಿಂದ ಮನೆಗಳಿಂದ ಹೋಟೆಲ್‌ಗಳಿಂದ ಸಿಗುವ ಹಸಿ ತ್ಯಾಜ್ಯವನ್ನು ಹಂದಿಗಳಿಗೆ ಹಾಕಲಾಗುವುದು. ಹಂದಿಗಳನ್ನು ನೋಡಿಕೊಂಡು ಅಲ್ಲೇ ಉಳಿದುಕೊಳ್ಳುವವರಿಗೆ ಶೆಡ್ ಮಾದರಿಯ ವಸತಿ ನಿರ್ಮಾಣ ಮಾಡಲಾಗಿದೆ.‌

ವರಾಹ ಶಾಲೆ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ :ಹೊರವಲಯದಲ್ಲಿ ನಿರ್ಮಾಣವಾಗಿರುವ ವರಾಹ ಶಾಲೆ ಹೊಸಹಳ್ಳಿ ಗ್ರಾಮಸ್ಥರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೊಸಹಳ್ಳಿ ಗಡಿಗುಡಾಳ್ ಗ್ರಾಪಂ ಸದಸ್ಯ ಕುಮಾರ್ ನಾಯ್ಕ್ ಮಾತನಾಡಿ, ವರಾಹ ಶಾಲೆ ತೆರೆಯುವುದರಿಂದ ಇಲ್ಲಿನ ಜನರಿಗೆ ತೊಂದರೆಯಾಗಲಿದೆ. ಹಂದಿಗಳನ್ನು ಸಾಕಾಣಿಕೆ ಮಾಡುವುದರಿಂದ ರೋಗರುಜಿನ ಸೃಷ್ಟಿಯಾಗಲಿದ್ದು, ಇದರ ಬದಲಿಗೆ ವಸತಿ ಶಾಲೆಗಳನ್ನು ನಿರ್ಮಾಣ ಮಾಡಬೇಕಿದೆ. ವರಾಹ ಶಾಲೆ ತೆರೆಯುವುದರಿಂದ ಹತ್ತಿರದಲ್ಲಿ ಇರುವ ಆಶ್ರಯ ಕಾಲೋನಿಯಲ್ಲಿರುವ ಮಕ್ಕಳು ಭಯದಲ್ಲೇ ಜೀವನ ಮಾಡಬೇಕಿದೆ ಎಂದರು.

ಪಾಲಿಕೆ ಆಯುಕ್ತೆ ಪ್ರತಿಕ್ರಿಯೆ :ಪಾಲಿಕೆ ಆಯುಕ್ತೆ ರೇಣುಕ ಪ್ರತಿಕ್ರಿಯಿಸಿ, ಈ ಪ್ರಕರಣ ಕೋರ್ಟ್​ನಲ್ಲಿದ್ದು, ಪಾಲಿಕೆ ಹಂದಿ ಮಾಲೀಕರಿಗೆ ತರಬೇತಿ ನೀಡಬೇಕೆಂದು ಆದೇಶಿಸಿದೆ. ಸಭೆ ಕರೆದಿದ್ದು ಯಾರೂ ಕೂಡ ಭಾಗಿಯಾಗಿಲ್ಲ. ವರಾಹ ಶಾಲೆಯ ಕೆಲ ಕಾಮಗಾರಿ ಮುಗಿದಿದ್ದು, ಅನುದಾನ ಕಡಿಮೆ ಆಗಿದ್ದರಿಂದ ಕೆಲ ಕಾಮಗಾರಿ ನಿಂತಿದೆ. ಪ್ರತಿಯೊಂದು ಸೌಲಭ್ಯಗಳನ್ನೂ ಶಾಲೆಯ ಬಳಿ ಒದಗಿಸಲಾಗಿದೆ. ವರಾಹ ಶಾಲೆಯಿಂದ ಆಶ್ರಯ ಕಾಲೋನಿ ನಿವೇಶನಗಳು ದೂರ ಇವೆ. ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು.

ಇದನ್ನೂ ಓದಿ :ಕಾರವಾರದ ಆಳಸಮುದ್ರದಲ್ಲಿ ಮುಳುಗುತ್ತಿದ್ದ ಬೋಟ್: ಇನ್ನೊಂದು ಬೋಟ್‌ ಸಹಾಯದಿಂದ 12 ಮೀನುಗಾರರ ರಕ್ಷಣೆ

Last Updated : May 24, 2023, 10:25 AM IST

ABOUT THE AUTHOR

...view details