ದಾವಣಗೆರೆ: ಬಾಲಕನೊಬ್ಬನ ಸಮಯಪ್ರಜ್ಞೆಯಿಂದ ಆತ್ಮಹತ್ಯೆಗೆ ಯತ್ನಿಸಿದ ಅಂಗಡಿಯೊಂದರ ಮಾಲಕಿಯ ಪ್ರಾಣ ಉಳಿದ ಘಟನೆ ಆವರಗೆರೆ ಸಮೀಪದ ಉತ್ತಮ್ ಚಂದ್ ಬಡಾವಣೆಯಲ್ಲಿ ನಡೆದಿದೆ.
ಎಎಸ್ಐ ವೆಂಕಟೇಶ್ ರೆಡ್ಡಿ ಹಾಗೂ ಲಕ್ಷ್ಮಿ ದಂಪತಿಯ 12 ವರ್ಷದ ಪುತ್ರ ಜಿ.ವಿ. ಸುಶಾಂತ್ ರೆಡ್ಡಿ ಅಂಗಡಿಯ ಮಾಲಕಿ ಪ್ರಾಣಾಪಾಯದಿಂದ ಪಾರಾಗಲು ಕಾರಣನಾದ ಬಾಲಕ.
ಘಟನೆಯ ಹಿನ್ನೆಲೆ ಏನು?:
ಉತ್ತಮ್ ಚಂದ್ ಬಡಾವಣೆಯಲ್ಲಿನ ಅಂಗಡಿಗೆ ಬಾಲಕ ಸುಶಾಂತ್ ತನ್ನ 19 ವರ್ಷದ ಅಕ್ಕ ಜಿ. ವಿ. ಪ್ರಣೀತಾ ಜೊತೆ ಚಾಕೊಲೇಟ್ ತರಲು ಹೋಗಿದ್ದಾನೆ. ಈ ವೇಳೆ ಅಂಗಡಿಯಲ್ಲಿ ಯಾರೂ ಇರಲಿಲ್ಲ, ಸ್ವಲ್ಪ ಹೊತ್ತು ಕಾದರೂ - ಕೂಗಿದರೂ ಯಾರೂ ಬರಲಿಲ್ಲ. ಈ ಹಿನ್ನೆಲೆ, ಮನೆಯ ಕಿಟಕಿ ಬಾಗಿಲಿನಲ್ಲಿ ಇಣುಕಿ ನೋಡಿದಾಗ ಅಂಗಡಿಯ ಮಾಲಕಿ ನೇಣು ಹಾಕಿಕೊಳ್ಳುತ್ತಿದ್ದನ್ನು ಬಾಲಕ ನೋಡಿ ಜೋರಾಗಿ ಕೂಗಿದ್ದಾನೆ. ಬಳಿಕ ತನ್ನ ಅಕ್ಕನ ಜೊತೆ ಹೋಗಿ ಮಾಲಕಿಯ ರಕ್ಷಣೆಗೆ ಮುಂದಾಗಿದ್ದಾನೆ.
ಅಷ್ಟರೊಳಗೆ ಮಾಲಕಿಯ 14 ವರ್ಷದ ಪುತ್ರನೂ ಓಡೋಡಿ ಬಂದಿದ್ದಾನೆ. ಬಳಿಕ ಸ್ಥಳೀಯರು ಕೂಡಲೇ ಸ್ಥಳಕ್ಕೆ ಆಗಮಿಸಿ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಸುಶಾಂತ್ ಅಲ್ಲೇ ಇದ್ದ ಒಬ್ಬರ ಮೊಬೈಲ್ ಪಡೆದು ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾನೆ. ಆ್ಯಂಬುಲೆನ್ಸ್ ಮೂಲಕ ಬಾಪೂಜಿ ಆಸ್ಪತ್ರೆಗೆ ಕರೆದೊಯ್ದು ಮಹಿಳೆಯನ್ನು ದಾಖಲಿಸಲಾಗಿದೆ. ಸದ್ಯ ಅಸ್ವಸ್ಥ ಮಹಿಳೆಗೆ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.