ದಾವಣಗೆರೆ :ಸಾವಿರಾರು ಮುಳ್ಳಿನ ರಾಶಿಯ ಮೇಲೆ ಕೂರುವುದು ಸಾಮಾನ್ಯ ಅಲ್ಲವೇ ಅಲ್ಲ. ಸಾಮಾನ್ಯವಾಗಿ ಕಾಲಿಗೆ ಒಂದು ಮುಳ್ಳು ಚುಚ್ಚಿದರೆ ಸಾಕಷ್ಟು ನೋವಾಗುತ್ತದೆ. ಆದರೆ, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸುಕ್ಷೇತ್ರದಲ್ಲಿ ಪ್ರತಿ ವರ್ಷ ಮುಳ್ಳಿನ ಗದ್ದಿಗೆ ಉತ್ಸವ ನಡೆಯುತ್ತದೆ. ಈ ಉತ್ಸವದ ವಿಶೇಷವೆಂದರೆ ಶ್ರೀಗಳೊಬ್ಬರು ಸಾವಿರಾರು ಜಾಲಿ ಮುಳ್ಳಿನಿಂದ ಮಾಡಲ್ಪಟ್ಟ ಮುಳ್ಳಿನ ಗದ್ದಿಗೆ ಮೇಲೆ ಕುಳಿತು ಅದರ ಮೇಲೆ ಹಾರಿ ಜಿಗಿಯುವ ಪವಾಡ ನಡೆಯುತ್ತದೆ. ನಂತರ ಶ್ರೀಗಳು ನುಡಿಯುವ ಕಾರ್ಣಿಕ ಭವಿಷ್ಯವನ್ನು ಕೇಳಿ ಭಕ್ತರು ಪುನೀತರಾಗುತ್ತಾರೆ.
ಪುಣ್ಯ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ಜರುಗಿತು ಮುಳ್ಳು ಗದ್ದಿಗೆ ಉತ್ಸವ.. ಚನ್ನಗಿರಿ ತಾಲೂಕಿನ ಹರನಹಳ್ಳಿ-ಕೆಂಗಾಪುರ ರಾಮಲಿಂಗೇಶ್ವರ ಪುಣ್ಯ ಕ್ಷೇತ್ರದಲ್ಲಿ ಪ್ರತಿ ವರ್ಷ ನಡೆಯುವಂತೆ ಈ ವರ್ಷವು ಕೂಡ ಮುಳ್ಳು ಗದ್ದಿಗೆ ಉತ್ಸವ ಬಹಳ ವಿಜೃಂಭಣೆಯಿಂದ ಜರುಗಿತು. ಭಾನುವಾರ ಬೆಳಗಿನ ಜಾವ ಆರು ಗಂಟೆಯಿಂದಲೇ ಆರಂಭವಾದ ಮುಳ್ಳು ಗದ್ದಿಗೆ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಈ ಪುಣ್ಯಕ್ಷೇತ್ರದ ರಾಮಲಿಂಗೇಶ್ವರ ಸ್ವಾಮೀಜಿಯವರು ಮುಳ್ಳಿನ ಗದ್ದಿಗೆ ಮೇಲೆ ಕುಳಿತು ಪವಾಡ ಸೃಷ್ಟಿಸಿದರು. ಸಾವಿರಾರು ಜಾಲಿ ಮುಳ್ಳುಗಳಿಂದ ನಿರ್ಮಾಣವಾದ ಗದ್ದಿಗೆ ಮೇಲೆ ಕೂರುವ ಸ್ವಾಮೀಜಿಯವರನ್ನು ಇಡೀ ಗ್ರಾಮದ ತುಂಬಾ ಮೆರವಣಿಗೆ ನಡೆಸುವುದು ಪ್ರತಿ ವರ್ಷ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಇದಲ್ಲದೆ ಸ್ವಾಮೀಜಿ ಅವರು ಇದೇ ಮುಳ್ಳಿನ ಗದ್ದಿಗೆ ಮೇಲೆ ಹಾರಿ ಜಿಗಿಯುವ ದೃಶ್ಯ ಭಕ್ತರ ಮೈನವಿರೇಳಿಸುತ್ತದೆ.
ಇದನ್ನೂ ಓದಿ :ಸಚಿವ ಅಶ್ವತ್ಥನಾರಾಯಣ್ ಹೇಳಿಕೆ ಖಂಡಿಸಿ ಹೊನ್ನಾಳಿ ಬಂದ್ : ಕುರುಬ ಸಮಾಜದಿಂದ ಪ್ರತಿಭಟನೆ