ದಾವಣಗೆರೆ: ಇಲಿಗಾಗಿ ವಿಷ ಸವರಿ ಇಟ್ಟಿದ್ದ ಟೊಮೆಟೊ ಹಣ್ಣನ್ನು ಆಕಸ್ಮಿಕವಾಗಿ ಸೇವಿಸಿ ಯುವತಿ ಕೊನೆಯುಸಿರೆಳೆದಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ನಡೆದಿದೆ. ಸೋಮವಾರ ಯವತಿ ಹಣ್ಣು ಸೇವಿಸಿದ್ದು, ಶುಕ್ರವಾರ ಸಾವನ್ನಪ್ಪಿದ್ದಾಳೆ. ಹೆಚ್ ಐಶ್ವರ್ಯ (21) ಮೃತ ಯುವತಿ. ಇವರು ಬಿಎ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಮನೆಯಲ್ಲಿ ಇಲಿಗಳು ಹೆಚ್ಚಾಗಿದ್ದರಿಂದ ಅವುಗಳನ್ನು ಹಿಡಿಯಲು ವಿಷ ಸವರಿ ಟೊಮೆಟೊ ಹಣ್ಣನ್ನು ಇಡಲಾಗಿತ್ತು. ಜೂನ್ 05 ಸೋಮವಾರ ದಂದು ಮೃತ ಯುವತಿ ಐಶ್ವರ್ಯ ಆಕಸ್ಮಿಕವಾಗಿ ಇಲಿಗಾಗಿ ಇರಿಸಿದ್ದ ಟೊಮೆಟೊ ಹಣ್ಣನ್ನು ಸೇವಿಸಿದ್ದಾಳೆ. ಟೊಮೆಟೊ ಹಣ್ಣನ್ನು ಸೇವಿಸಿದ ಬಳಿಕ ದೇಹದಲ್ಲಿ ರಿಯಾಕ್ಷನ್ ಆಗಿದೆ. ಇದನ್ನು ಗಮನಿಸಿದ ಯುವತಿ ತನ್ನ ಕುಟುಂಬಕ್ಕೆ ತಿಳಿಸಿದ್ದಾಳೆ.
ಏನು ಆಗಲ್ಲ, ಮನೆಯವರು ಕಡಿಮೆಯಾಗುತ್ತೆ. ಅದು ಕೇವಲ ಇಲಿಗಳಿಗೆ ಮಾತ್ರ ವಿಷವಾಗಿ ಕೆಲಸ ಮಾಡುತ್ತದೆ ಎಂದು ಸುಮ್ಮನಾಗಿದ್ದಾರೆ. ಸಮಸ್ಯೆ ಮತ್ತೆ ಹೆಚ್ಚಾಗಿದೆ. ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದಾರೆ.
ಬಳಿಕ ಅಲ್ಲಿಂದ ಬೇರೊಂದು ಆಸ್ಪತ್ರೆಗೆ ಹೋಗಿದ್ದಾರೆ. ಚಿಕಿತ್ಸೆ ಹರಸಿ ತಿರುಗಾಡಿದರೂ ಕೂಡ ಯಾವುದೇ ಪ್ರಯೋಜನೆಯಾಗದೆ ವಿಷ ಇಡೀ ದೇಹಕ್ಕೆ ಹರಡಿ ಚಿಕಿತ್ಸೆ ಫಲಕಾರಿಯಾಗದೆ ಐಶ್ವರ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಮೃತಳ ಚಿಕ್ಕಪ್ಪ ಹಾಗು ಸಂಬಂಧಿಕರು ನ್ಯಾಮತಿ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆಂದು ನ್ಯಾಮತಿ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.