ದಾವಣಗೆರೆ: ಶಿಕ್ಷಣ, ಕೆಲಸ ನಿಮಿತ್ತ ರಸ್ತೆಯಲ್ಲಿ ಸಂಚರಿಸುವ ಯುವತಿಯರನ್ನು ಕೆಲವು ಪುಂಡ ಯುವಕರು ಕಾಡಿಸುವುದು, ಹಿಂಬಾಲಿಸುವುದು ಅತಿಯಾಗುತ್ತಿದೆ. ಯುವತಿಯರನ್ನು ಹಿಂಬಾಲಿಸಿ ಅಸಭ್ಯವಾಗಿ ವರ್ತಿಸುವುದಲ್ಲದೇ, ಲೈಂಗಿಕ ಕಿರುಕುಳ ನೀಡುವ ಆರೋಪಗಳೂ ಕೇಳಿಬರುತ್ತಿವೆ. ಇಂಥ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ದಾವಣಗೆರೆ ಪೊಲೀಸರು ಇದೀಗ ಓರ್ವ ಯುವಕನನ್ನು ಬಂಧಿಸಿದ್ದಾರೆ. ದಾವಣಗೆರೆ ನಿವಾಸಿ ಖಾದೀರ್ ಖಾನ್ (20) ಎಂಬಾತ ಬಂಧಿತ ಆರೋಪಿ. ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
"ನಗರದ ಎಂಸಿಸಿಬಿ ಬ್ಲಾಕ್ ಮಾರ್ಗವಾಗಿ ತೆರಳುತ್ತಿದ್ದಾಗ (ಜುಲೈ 05 ರಂದು) ಬೈಕ್‌ನಲ್ಲಿ ಆಗಮಿಸಿದ್ದ ಖಾದೀರ್ ಖಾನ್ ನನ್ನನ್ನು ಹಿಂಬಾಲಿಸಿ, ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಜುಲೈ 16ರಂದು ಅದೇ ಆರೋಪಿ ಮತ್ತೆ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾನೆ" ಎಂದು ಓರ್ವ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಹಲವು ದಿನಗಳಿಂದ ಹಲವು ವಿದ್ಯಾರ್ಥಿನಿಯರಿಗೆ ಚುಡಾಯಿಸಿರುವುದು, ಬೈಕ್‌ನಲ್ಲಿ ಹಿಂಬದಿಯಿಂದ ಬಂದು ಮೈ-ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿರುವ ವಿಚಾರವನ್ನು ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಯುವತಿಗೆ ಕಿರುಕುಳ- ಹೈದರಾಬಾದ್‌ನಲ್ಲಿ ನಡೆದ ಪ್ರಕರಣ : ಸೋಷಿಯಲ್ ಮೀಡಿಯಾ ಮೂಲಕ ಪರಿಚಯವಾಗಿ ಯುವತಿಗೆ ಕಿರುಕುಳ ನೀಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ನಲ್ಲಿ ಬಿ.ಟೆಕ್ ಓದುತ್ತಿದ್ದ ಯುವತಿಗೆ ಅಲಿ ಎಂಬಾತ ಸಾಮಾಜಿಕ ಜಾಲತಾಣ ಸ್ನ್ಯಾಪ್‌ಚಾಟ್ ಮೂಲಕ ಪರಿಚಯವಾಗಿದ್ದ. ಯುವತಿಯೊಂದಿಗೆ ಫೋನ್ ಸಂಭಾಷಣೆ ಮತ್ತು ವಿಡಿಯೋ ಕರೆಗಳನ್ನು ಮಾಡಿದ್ದಾನೆ. ಕ್ರಮೇಣ ಯುವತಿ ಆತನನ್ನು ನಿರ್ಲಕ್ಷಿಸಿದ್ದಾಳೆ. ಆದರೆ ಯುವಕ ವಿಡಿಯೋ ಕರೆಯ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿ ಬೆದರಿಕೆ ಹಾಕುತ್ತಿದ್ದ. ಇದರಿಂದ ಭಯಗೊಂಡ ಯುವತಿ ಮಹಿಳಾ ಹಕ್ಕುಗಳ ಕಾರ್ಯಕರ್ತರಿಗೆ ದೂರು ನೀಡಿದ್ದಳು. ಈ ಮಾಹಿತಿಯಿಂದ ಆರೋಪಿ ಅಲಿಯನ್ನು ಕಾರ್ಯಕರ್ತರು ಹಿಡಿದಿದ್ದರು. ಬಳಿಕ ಯುವತಿ ಶೀ ಟೀಮ್‌ಗೆ ದೂರು ನೀಡಿದ್ದರು.
ಪ್ರಾಚಾರ್ಯರಿಂದಲೇ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ಆರೋಪ: ಜಿಲ್ಲೆಯ ಪ್ರತಿಷ್ಠಿತ ಕಾಲೇಜಿನ ಪ್ರಾಚಾರ್ಯರ ಮೇಲೆ ಲೈಂಗಿಕ ಕಿರುಕುಳ ಆರೋಪ ದಾಖಲಾಗಿತ್ತು. ಕಾಲೇಜಿನ ಅತಿಥಿ ಉಪನ್ಯಾಸಕಿ ಆರೋಪ ಮಾಡಿದ್ದು, ಎಫ್ಐಆರ್ ದಾಖಲಾಗಿ ತನಿಖೆ ನಡೆದಿದೆ. ದೂರಿನಲ್ಲಿ''ಕಳೆದ ಮಾರ್ಚ್ 31ರಂದು ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಕಾಲೇಜಿನ ಭೌತಶಾಸ್ತ್ರ ಲ್ಯಾಬ್‌ಗೆ ಕರೆದುಕೊಂಡು ಹೋಗಿ ಅಶ್ಲೀಲವಾಗಿ ಮಾತನಾಡಿದ್ದಲ್ಲದೆ, ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ" ಎಂದು ದೂರಿನಲ್ಲಿ ಉಪನ್ಯಾಸಕಿ ಉಲ್ಲೇಖಿಸಿದ್ದಾರೆ. "ಕಾಲೇಜಿನಲ್ಲಿ ನಡೆಯುತ್ತಿದ್ದ ಪ್ರತಿ ಕಾರ್ಯಕ್ರಮದಲ್ಲೂ ತಮ್ಮನ್ನು ಹುಡುಕಿಕೊಂಡು ಪ್ರಿನ್ಸಿಪಾಲ್ ಬರುತ್ತಿದ್ದರು. ಕಾಮದ ದೃಷ್ಟಿಯಿಂದ ನೋಡುತ್ತಿದ್ದರು. ಸಹಕರಿಸದಿದ್ದರೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ಇದರಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದೇನೆ'' ಎಂದು ಸಂತ್ರಸ್ತೆ ಆರೋಪಿಸಿದ್ದರು.
ಇದನ್ನೂ ಓದಿ:ಆಪ್ರಾಪ್ತ ಮಗಳ ಮೇಲೆ ತಂದೆಯಿಂದಲೇ ಲೈಂಗಿಕ ಕಿರುಕುಳ: ಪ್ರಕರಣದ ಮರು ತನಿಖೆಗೆ ಹೈಕೋರ್ಟ್ ಆದೇಶ
ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ವಕೀಲರ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ