ದಾವಣಗೆರೆ :ಮಹಾನಗರ ಪಾಲಿಕೆಯ 19 ನೇ ವಾರ್ಡಿನ ಬಿಜೆಪಿ ಸದಸ್ಯರಾದ ಶಿವಪ್ರಕಾಶ್ ಎಂಬವರು ತಮ್ಮ ಮಗಳ ಹುಟ್ಟುಹಬ್ಬವನ್ನು ಕ್ಯಾನ್ಸರ್ ರೋಗಿಗೆ ಒಂದು ಲಕ್ಷ ರೂಪಾಯಿ ಧನಸಹಾಯ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ. ಕಳೆದ ಬಾರಿ ತಮ್ಮ ಪುತ್ರನ ಹುಟ್ಟುಹಬ್ಬಕ್ಕೆ ವೃದ್ಧ ದಂಪತಿಗೆ ಮನೆ ನಿರ್ಮಾಣ ಮಾಡಿಕೊಟ್ಟು ಗಮನ ಸೆಳೆದಿದ್ದರು. ಈ ಬಾರಿಯೂ ಕೂಡ ತಮ್ಮ ಮಗಳ ಹುಟ್ಟು ಹಬ್ಬವನ್ನು ಇತರರಿಗೆ ಮಾದರಿಯಾಗುವಂತೆ ಆಚರಣೆ ಮಾಡಿದ್ದಾರೆ.
ನಗರದ ನಿಟ್ಟುವಳ್ಳಿಯ ಶ್ರೀರಾಮ ಬಡಾವಣೆ ನಿವಾಸಿ ಬಸವರಾಜ್ ದಂಪತಿ ಪುತ್ರಿ ಶಾಂತಿ (16) ಎಂಬ ಬಾಲಕಿಯ ಚಿಕಿತ್ಸೆಗಾಗಿ ಶಿವಪ್ರಕಾಶ್ ಅವರು ಹಣ ನೀಡುವ ಮೂಲಕ ಸಹಾಯಹಸ್ತ ಚಾಚಿದ್ದಾರೆ. ಬಾಲಕಿ ಶಾಂತಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಬಾಲಕಿಯ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಮಗಳಿಗೆ ಚಿಕಿತ್ಸೆ ನೀಡಲು ಪರದಾಡುತ್ತಿದ್ದರು. ಶಾಂತಿಯು ಮಾರಕ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ತಿಳಿದ ಶಿವಪ್ರಕಾಶ್ ಧನ ಸಹಾಯ ಮಾಡಲು ನಿರ್ಧರಿಸಿದರು. ಈ ಮೂಲಕ ಮಗಳ ಹುಟ್ಟಹಬ್ಬದಂದು ಬಾಲಕಿಗೆ ಒಂದು ಲಕ್ಷ ರೂಪಾಯಿ ನೀಡಿದ್ದಾರೆ.
ಇದನ್ನೂ ಓದಿ :KL Rahul helps Hubli student: ಕಾಲೇಜು ಶುಲ್ಕ ಕಟ್ಟಲಾಗದ ಬಡ ವಿದ್ಯಾರ್ಥಿಗೆ ಧನ ಸಹಾಯ ಮಾಡಿದ ಕೆಎಲ್ ರಾಹುಲ್
ಈ ಬಗ್ಗೆ ಮಾತನಾಡಿದ ಶಿವಪ್ರಕಾಶ್, ಕಳೆದ ಬಾರಿ ನನ್ನ ಮಗನ ಜನ್ಮದಿನಕ್ಕೆ ವೃದ್ಧ ದಂಪತಿಗೆ ಮನೆ ನಿರ್ಮಾಣ ಮಾಡಿ ಕೊಟ್ಟಿದ್ದೆ. ಈ ಬಾರಿ ನನ್ನ ಪುತ್ರಿಯ ಜನ್ಮದಿನದ ಪ್ರಯುಕ್ತ ಬಡವರಿಗೆ ಸಹಾಯ ಮಾಡಬೇಕು ಅನಿಸಿತು. ಹಾಗಾಗಿ ಕ್ಯಾನ್ಸರ್ನಿಂದ ಬಳಲುತ್ತಿರುವ ಬಾಲಕಿ ಶಾಂತಿಗೆ ಧನ ಸಹಾಯ ಮಾಡಿದ್ದೇನೆ. ಇದು ಅವಳ ಚಿಕಿತ್ಸೆಗೆ ಪೂರಕವಾಗಲಿದೆ. ಅವರ ಮನೆಯ ಪರಿಸ್ಥಿತಿ ನೋಡಿ ಬೇಸರ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಬಂದ ವಿಡಿಯೋ ನೋಡಿ ಬಾಲಕಿಗೆ ಒಂದು ಲಕ್ಷ ರೂಪಾಯಿ ನೆರವು ನೀಡಿದ್ದೇನೆ. ಕಷ್ಟದಲ್ಲಿರುವ ಕುಟುಂಬಗಳಿಗೆ ಸ್ಪಂದಿಸಬೇಕಾದುದು ಮುಖ್ಯ ಎಂದು ಹೇಳಿದರು.
ಶಿವಪ್ರಕಾಶ್ ಹಲವು ವರ್ಷಗಳಿಂದ ಸಮಾಜಸೇವೆಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಅಲ್ಲದೆ ಬಡವರಿಗೆ ನೆರವು ನೀಡುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಓರ್ವ ವ್ಯಕ್ತಿಗೆ ಪೂರ್ಣ ಬಂಡವಾಳ ಹಾಕಿ ಅಂಗಡಿ ಮಾಡಲು ಸಹಕರಿಸಿದ್ದರು. ಹೀಗೆ ಕಷ್ಟ ಎಂದು ಬಂದವರಿಗೆ ಧನ ಸಹಾಯ ಮಾಡುವುದು, ಅನಾಥ ಮಕ್ಕಳ ವಿದ್ಯಾಭ್ಯಾಸ ಶುಲ್ಕ ಭರಿಸುವುದು, ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಶಿವಪ್ರಕಾಶ್ ರವರ ಓರ್ವ ಸಹೋದರ ಪೊಲೀಸ್ ಅಧಿಕಾರಿ, ಸಹೋದರಿ ಉಪ ನೋಂದಣಾಧಿಕಾರಿ, ಹೀಗೆ ಕುಟುಂಬದಲ್ಲಿ ಬಹುತೇಕರು ಸರ್ಕಾರ ಹುದ್ದೆಯಲ್ಲಿದ್ದಾರೆ. ಶಿವಪ್ರಕಾಶ್ ಹಲವು ವ್ಯವಹಾರ ನಡೆಸುತ್ತಾರೆ. ಹೀಗೆ ನಡೆಸುವ ವ್ಯವಹಾರದಲ್ಲಿ ಸ್ವಲ್ಪ ಹಣವನ್ನು ಬಡವರಿಗೆ ದಾನ ಮಾಡುತ್ತಾರೆ.
ಇದನ್ನೂ ಓದಿ :ವೈದ್ಯೆಯಾಗುವ ಕನಸು ಕಂಡಿದ್ದ ವಿದ್ಯಾರ್ಥಿನಿಗೆ ಮೂಳೆ ಕ್ಯಾನ್ಸರ್.. ಮಗಳ ಚಿಕಿತ್ಸೆಗೆ ಹಣಕಾಸಿನ ನೆರವು ಕೋರುತ್ತಿದೆ ಕುಟುಂಬ