ದಾವಣಗೆರೆ:ಬಸವರಾಜಬೊಮ್ಮಾಯಿ ಅವರು ಬುದ್ಧಿವಂತ ಸಿಎಂ ಆದರೆ ಅವರ ಆಡಳಿತದ ಕೀ ಮೋದಿ ಅಮಿತ್ ಶಾ, ಬಿಎಲ್ ಸಂತೋಷ್, ಆರ್ ಎಸ್ಎಸ್ ಹಾಗೂ ಬಿಎಸ್ ಯಡಿಯೂರಪ್ಪ ಅವರ ಬಳಿ ಇದೆ. ಹೀಗಾಗಿ ಅವರು ಹೇಳಿದಂತೆ ಬೊಮ್ಮಾಯಿ ಕೇಳ್ತಾರೆ ಎಂದು ಆಪ್ ಪಕ್ಷದ ಮುಖಂಡ ಮುಖ್ಯಮಂತ್ರಿ ಚಂದ್ರು ವಾಗ್ದಾಳಿ ನಡೆಸಿದರು.
ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆದ ಆಪ್ ಪಕ್ಷದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕ ಯತ್ನಾಳ್ ಅವರು 2500 ಕೋಟಿ ಇದ್ರೆ ಬಿಜೆಪಿಯಲ್ಲಿ ಸಿಎಂ ಆಗ್ಬಹುದು ಎಂದು ಹೇಳಿದ್ದರು. ಅವರ ಪಕ್ಷದಲ್ಲಿ ಈಗಾಗಲೇ ಏಳು ಜನ ಹಣ ಇಟ್ಕೊಂಡು ಸಿಎಂ ಆಗಲು ಕಾಯ್ತಿದ್ದಾರೆ. ಅಶ್ವತ್ಧ್ ನಾರಾಯಣ್, ನಿರಾಣಿ, ಆಶೋಕ, ಈಶ್ವರಪ್ಪ ಕಾಯ್ತಿದ್ದವರು ಎಂದು ಚಂದ್ರು ಆರೋಪಿಸಿದರು. ಇನ್ನು ಜೆಡಿಎಸ್ ಉಸುರವಳ್ಳಿ ಪಕ್ಷ, ಈ ಜೆಡಿಎಸ್ ಪಕ್ಷ ಒಮ್ಮೆ ಕಾಂಗ್ರೆಸ್ ಕಡೆ, ಒಮ್ಮೆ ಬಿಜೆಪಿ ಕಡೆ ಅಧಿಕಾರಕ್ಕಾಗಿ ವಾಲುತ್ತೆ, ಇಡೀ ಕುಟುಂಬ ಅಧಿಕಾರ ನಡೆಸುತ್ತಿದ್ದು, ಇಲ್ಲಿ ಸೂಟ್ಕೇಸ್ ರಾಜಕೀಯ ಕೂಡ ನಡೆಯುತ್ತೇ ಎಂದು ಜೆಡಿಎಸ್ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಭವ್ಯಬಂಗಲ್ಲೆಯಲ್ಲಿ ರಾಮ, ಭಂಟ ಹನುಮಂತ ಬೀದಿಯಲ್ಲಿ: ಬಿಜೆಪಿಗೆ ರಾಮಮಂದಿರ ಬೇಕಾಗಿದೆ ಆದರೆ ರಾಮರಾಜ್ಯ ಬೇಕಾಗಿಲ್ಲ. ಆಪ್ ಪಕ್ಷಕ್ಕೆ ರಾಮ ಮಂದಿರ ಬೇಡ ರಾಮರಾಜ್ಯ ಬೇಕಾಗಿದೆ. ಬಿಜೆಪಿಯವರಿಗೆ ರಾಮ ಮಂದಿರ ನಿರ್ಮಾಣಕ್ಕಾಗಿ ಸಾವಿರಾರು ಕೋಟಿ ಖರ್ಚು ಮಾಡಿದರು, ಆದರೆ, ಅಭಿವೃದ್ಧಿ ಗೆ ಖರ್ಚು ಮಾಡಲಿಲ್ಲ ಎಂದರು.