ದಾವಣಗೆರೆ: ಬಿಜೆಪಿ, ಜೆಡಿಎಸ್ನವರಿಗೆ ನನ್ನನ್ನು ಕಂಡರೆ ಭಯ. ಏನು ಬಲವಾದ ಕಾರಣ ಇಲ್ಲದೇ ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತಾರೆ ಹೇಳಿ? ಎಂದು ವಿಧಾನಸಭೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ದಾವಣಗೆರೆ ಜಿಲೆಯ ಹರಿಹರ ಸಮೀಪದ ಕುಮಾರಪಟ್ಟಣಂನ ಗೆಸ್ಟ್ ಹೌಸ್ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಕನಿಷ್ಠ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. 15 ಸ್ಥಾನಗಳಲ್ಲಿ ಗೆದ್ದರೂ ಅಚ್ಚರಿ ಏನಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ಲ್ಲಿ ಹಲವು ಮುಖಂಡರಿದ್ದಾರೆ. ಅವರನ್ನು ಬಿಟ್ಟು ನನ್ನ ಮೇಲೆ ಇತರ ಪಕ್ಷದವರು ಮುಗಿಬೀಳಲು ಉಪಚುನಾವಣೆಯಲ್ಲಿ ಸೋಲಿನ ಹೆದರಿಕೆ ಇರುವುದೇ ಕಾರಣ ಎಂದ ಅವರು, ಉಪಚುನಾವಣೆಯಲ್ಲಿ ಬಿಜೆಪಿ ಯದ್ವಾತದ್ವಾ ಹಣ ಖರ್ಚು ಮಾಡುತ್ತಿದೆ. ಜಾತಿ, ಧರ್ಮದ ಹೆಸರಿನಲ್ಲಿ, ಆಮಿಷವೊಡ್ಡಿ ಮತಯಾಚನೆ ಮಾಡುತ್ತಿರುವುದು ಚುನಾವಣಾ ಆಯೋಗದ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ವಿರುದ್ಧ ಆರೋಪಿಸಿದರು.
ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆಯೋಗವೂ ಆಡಳಿತ ವರ್ಗದ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.