ದಾವಣಗೆರೆ:ಬಾಂಬೆ ಶಾಸಕರು 12 ಜನ ಹುಡುಗಿಯರೊಂದಿಗೆ ಮೋಜು, ಮಸ್ತಿ ಮಾಡಿರುವ ಫೋಟೊ, ಸಿಡಿಗಳಿದ್ದರೆ ಬಿಡುಗಡೆ ಮಾಡಲಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಸವಾಲೆಸೆದಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೇಸ್ ರೀತಿ ವಿಡಿಯೊ ಸೃಷ್ಟಿ ಮಾಡುತ್ತಾರೆ ಎಂದು ಕೋರ್ಟ್ನಲ್ಲಿ ತಡೆಯಾಜ್ಞೆ ತಂದಿದ್ದೆವು. ಇಷ್ಟು ದಿನ ಯಾಕೆ ಈ ಆರೋಪ ಮಾಡಲಿಲ್ಲ. ಮೊನ್ನೆ ಸದನದಲ್ಲೇ ಹೇಳಬೇಕಿತ್ತಲ್ಲ. ಚುನಾವಣೆ ಇದ್ದಾಗ ಇವೆಲ್ಲ ರೀತಿಯ ಆರೋಪ ಬರುತ್ತದೆ. ಸತ್ಯ ತೋರಿಸಿದರೆ ಗೊತ್ತಾಗುತ್ತದೆ. ಇಲ್ಲಿ ಕಥೆಗಳನ್ನು ಕೇಳೋಕೆ ತಯಾರಿಲ್ಲ. ಸುವರ್ಣ ಸೌಧದಲ್ಲಿ ದಾಖಲೆ ಬಿಡುಗಡೆ ಯಾಕೆ ಮಾಡಲಿಲ್ಲ?, ಮೊದಲು ಕುಮಾರಸ್ವಾಮಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಡಲಿ ಎಂದರು.
ವಿಧಾನಸೌಧದಲ್ಲಿ ಹಣ ಸಿಕ್ಕ ವಿಚಾರ: ವಿಧಾನಸೌಧದಲ್ಲಿ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಜಗದೀಶ್ ಬಳಿ ಹಣ ಸಿಕ್ಕ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಏನೂ ಮಾಹಿತಿ ಇಲ್ಲ. ವಿರೋಧ ಪಕ್ಷಗಳ ಆರೋಪದಲ್ಲಿ ಹುರುಳಿಲ್ಲ. 40% ಆರೋಪ ಮಾಡಿ ಗುತ್ತಿಗೆ ಸಂಘದ ಅಧ್ಯಕ್ಷ ಬೇಲ್ ಮೇಲೆ ಇದ್ದಾರೆ. ಗುತ್ತಿಗೆದಾರರ ಸಂಘದವರು ಕಾಂಗ್ರೆಸ್ ಚೇಲಾಗಳು, ಸುಮ್ಮನೆ ಆಪಾದನೆ ಮಾಡುವುದು, ಗಾಳಿಯಲ್ಲಿ ಗುಂಡು ಹೊಡೆಯುವುದು ಬಿಡಲಿ. ದಾಖಲೆ ಕೊಡಿ ಉತ್ತರ ಕೊಡುತ್ತೇವೆ. ಅದು ಬಿಟ್ಟು ಈ ರೀತಿಯಾಗಿ ಹುಚ್ಚುಹುಚ್ಚಾಗಿ ಹೇಳಿಕೆ ನೀಡಬಾರದೆಂದು ಬೈರತಿ ವಾಗ್ದಾಳಿ ನಡೆಸಿದರು.
ಚುನಾವಣೆಗೆ ಸಂಬಂಧಿಸಿ ಪ್ರತಿಕ್ರಿಯಿಸಿ, ಪಕ್ಷದಲ್ಲಿರುವ ಹಿರಿಯರು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಎಲ್ಲಾ ಪ್ರಕ್ರಿಯೆಗಳು ನಡೀತಿವೆ. ಯಾರೆಲ್ಲ ನಮ್ಮ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಬರುತ್ತಾರೆಯೋ ಅವರೆಲ್ಲರನ್ನು ನಾವು ಸ್ವಾಗತಿಸುವ ಕೆಲಸ ನಾವು ಮಾಡುತ್ತೇವೆ. ನಮ್ಮ ರಾಷ್ಟೀಯ ಅಧ್ಯಕ್ಷರು, ನಮ್ಮ ಅಧ್ಯಕ್ಷರು, ಮುಖ್ಯಮಂತ್ರಿಗಳು ಇನ್ನೂ ಕೆಲವು ಹಿರಿಯರು ಏನು ತೀರ್ಮಾನ ಮಾಡುತ್ತಾರೋ ನಾವು ಅದಕ್ಕೆ ಬದ್ಧ. ನಾವಿನ್ನೂ ಕಿರಿಯರು ಎಂದರು.