ದಾವಣಗೆರೆ: ಬೇಡ ಜಂಗಮ ಹೋರಾಟ ಮುಗಿಯುವಂತೆ ಕಾಣುತ್ತಿಲ್ಲ. ಸದನದಲ್ಲಿ ಪ್ರಾರಂಭವಾದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಸುಳ್ಳು ಜಾತಿ ಪ್ರಮಾಣ ಪತ್ರಗಳ ವಿರೋಧಿ ಹೋರಾಟ ಬೆಣ್ಣೆ ನಗರಿಯಲ್ಲಿ ತೀವ್ರತೆ ಪಡೆದುಕೊಂಡಿದೆ. ಈ ಹೋರಾಟದಲ್ಲಿ ಕೊಲೆ ಯತ್ನ, ಬೆದರಿಕೆ, ಜಾತಿ ನಿಂದನೆ ಆರೋಪ ಸಹ ಕೇಳಿಬಂದಿದೆ.
ಮಾರ್ಚ್ 28ರಂದು ದಾವಣಗೆರೆ ಪ್ರೆಸ್ ಕ್ಲಬ್ ಎದುರು ಎಂ.ಪಿ.ರೇಣುಕಾಚಾರ್ಯ ಸಹೋದರ ದ್ವಾರಕೇಶ್ವರಯ್ಯ ಎಂಬವರಿಗೆ, ದಲಿತ ಸಂಘಟನೆಗಳು ನಕಲಿ ಎಸ್ಸಿ ಪ್ರಮಾಣ ಪತ್ರ ಪಡೆದಿದ್ದಾರೆಂದು ಪ್ರಶ್ನಿಸಿ, ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆಯ ಹಿನ್ನೆಲೆಯಲ್ಲಿ ಅವರು 13 ಜನ ದಲಿತ ಮುಖಂಡರ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ದಲಿತ ಮುಖಂಡರು, ತಾವು ಕೂಡ ಪ್ರತಿ ದೂರು ನೀಡಲು ಮುಂದಾಗಿದ್ದು ಪೊಲೀಸರು ತಮ್ಮ ದೂರು ದಾಖಲಿಸಿಕೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ, ರಾಜಕೀಯ ಒತ್ತಡದಿಂದ ಎಫ್ಐಆರ್ ದಾಖಲು ಮಾಡುತ್ತಿಲ್ಲ ಎಂದು ದಲಿತ ಮುಖಂಡ ಡಾ. ವೈ.ರಾಮಪ್ಪ ಆರೋಪಿಸಿದ್ದಾರೆ.