ದಾವಣಗೆರೆ :ಜಿಲ್ಲೆಯ ಅರಕೆರೆ ಗ್ರಾಮದ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಸಿಸಿಟಿವಿ, ಲಾಕರ್ ಬಾಕ್ಸ್ ಹಾಗೂ ಇತರ ವಸ್ತುಗಳನ್ನ ಅದೇ ಗ್ರಾಮದ ಸಮೀಪ ಇರುವ ಬಾವಿ ಹಾಕಿ ಪರಾರಿಯಾಗಿದ್ದು, ಈ ಅವೆಲ್ಲ ಪತ್ತೆಯಾಗಿವೆ.
ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ನಡೆದಿದ್ದ ಕಳ್ಳತನವನ್ನು ವೃತ್ತಿಪರ ಗ್ಯಾಂಗ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ, ಬ್ಯಾಂಕ್ ನಲ್ಲಿ ಕಳವು ಮಾಡಿದ್ದ ದರೋಡೆಕೋರರು ಸಿಸಿಟಿವಿ, ಲಾಕರ್ ಬಾಕ್ಸ್ ಸೇರಿದಂತೆ ಇತರೆ ವಸ್ತುಗಳನ್ನು ಅಲ್ಲಿಯೇ ಸಮೀಪದಲ್ಲಿನ ಬಾವಿಯಲ್ಲಿ ಎಸೆದಿದ್ದು ಪತ್ತೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತಪ್ಪ ತಿಳಿಸಿದ್ದಾರೆ.
ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಬಾವಿಯ ಬಳಿ ತೆರಳಿದಾಗ ಕಳ್ಳರು ಎಸೆದಿದ್ದ ಸಿಸಿಟಿವಿ, ಲಾಕರ್ ಬಾಕ್ಸ್, 13 ಸಾವಿರ ರೂಪಾಯಿ ನಗದು ಸಿಕ್ಕಿದ್ದು, ಆರೋಪಿಗಳ ಪತ್ತೆಗೆ ಹೊನ್ನಾಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅರಕೆರೆ ಕರ್ನಾಟಕ ಬ್ಯಾಂಕ್ ಕಳ್ಳತನ ಪ್ರಕರಣ ಘಟನೆ ಹಿನ್ನೆಲೆ:ಸೆಪ್ಟೆಂಬರ್ 24 ರ ರಾತ್ರಿ ಕರ್ನಾಟಕ ಬ್ಯಾಂಕ್ ಶಾಖೆಯ ಕಾಂಪೌಂಡ್ ಗೋಡೆ ಕೊರೆದು ಒಳ ಪ್ರವೇಶಿಸಿದ್ದ ಕಳ್ಳರು ದರೋಡೆ ಮಾಡಿದ್ದರು. ಗೋಡೆ ಕೊರೆದು ಬ್ಯಾಂಕ್ ನ ಸ್ಟ್ರಾಂಗ್ ರೂಂ ಪ್ರವೇಶಿಸಿದ್ದ ಖದೀಮರು ಐದು ಸಿಸಿಟಿವಿಗಳನ್ನು ನಿಷ್ಕ್ರಿಯಗೊಳಿಸಿ ಗೋದ್ರೇಜ್ ಲಾಕರ್ ಒಡೆಯಲು ಪ್ರಯತ್ನಿಸಿದ್ದಾರೆ. ಅದು ಸಾಧ್ಯವಾಗದಿದ್ದಾಗ ಕೈಗೆ ಸಿಕ್ಕ ಲಾಕರ್ ಬಾಕ್ಸ್ ಕದ್ದು ಪರಾರಿಯಾಗಿದ್ದರು.
ಆದ್ರೆ, ಈ ವಸ್ತುಗಳನ್ನು ಯಾಕೆ ಅರಕೆರೆ ಗ್ರಾಮದ ಕೆರೆಗೆ ಎಸೆದು ಹೋಗಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. 2014 ರಲ್ಲಿ ಇದೇ ಬ್ಯಾಂಕ್ ನಲ್ಲಿ ಸುಮಾರು ಒಂದು ಕೋಟಿ ರೂಪಾಯಿ ಕಳವು ನಡೆದಿತ್ತು. ಇಲ್ಲಿಯವರೆಗೆ ಆರೋಪಿಗಳ ಬಂಧನವಾಗಿಲ್ಲ. ಸದ್ಯ ಮತ್ತೆ ಇಂತಹ ಘಟನೆ ಮರುಕಳಿಸಿದ್ದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
ಜಿಲ್ಲೆಯ ಚನ್ನಗಿರಿಯಲ್ಲೂ ಇದೇ ಮಾದರಿ ಕಳ್ಳತನ ನಡೆದಿದ್ದು, ಪ್ರೊಫೆಷನಲ್ ಗ್ಯಾಂಗ್ ಈ ಕೃತ್ಯ ಎಸಗಿರಬಹುದು ಎಂಬ ಬಲವಾದ ಶಂಕೆ ಪೊಲೀಸ್ ಇಲಾಖೆಯದ್ದು. ಸದ್ಯ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.