ದಾವಣಗೆರೆ: ಜಿಲ್ಲೆಯ ಹರಿಹರ ಕ್ಷೇತ್ರದ ಬಿಜೆಪಿ ನೂತನ ಶಾಸಕ ಬಿ.ಪಿ.ಹರೀಶ್ಗೆ ಬಿಗ್ ರಿಲೀಫ್ ಸಿಕ್ಕಿದೆ. ಜಾತಿ ನಿಂದನೆ ಪ್ರಕರಣ ಎದುರಿಸುತ್ತಿದ್ದ ಶಾಸಕರಿಗೆ ದಾವಣಗೆರೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕೆಲವು ಷರತ್ತು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಏನಿದು ಪ್ರಕರಣ?: ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ದಲಿತ ಮುಖಂಡರು ಹಾಗೂ ಕೆಲವು ಪೌರ ಕಾರ್ಮಿಕರು ದಾವಣಗೆರೆ ನಿವಾಸದ ಬಳಿ ಅಭಿನಂದನೆ ತಿಳಿಸಲು ಹೋಗಿದ್ದರು. ಈ ಸಂದರ್ಭದಲ್ಲಿ ಶಾಸಕ ಬಿ.ಪಿ.ಹರೀಶ್ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ಪ್ರತಿಕ್ರಿಯಿಸಿದ್ದ ಅವರು, ಒಳ ಮೀಸಲಾತಿ ಪಡೆದ ಮಾದಿಗ ಸಮಾಜ ನಮ್ಮ ಜೊತೆ ಇರಬೇಕಿತ್ತು. ಬಂಜಾರ ಭೋವಿ ಅವರು ನಮಗೆ ಮತ ಹಾಕಿಲ್ಲ ಎಂದು ಬೇಜಾರಿಲ್ಲ. ಆದ್ರೆ ಅವರಿಗೆ ಸಹಾಯ ಮಾಡಿದ್ರೂ ಇಡೀ ರಾಜ್ಯದಲ್ಲಿ ಬಿಜೆಪಿ ಈ ಪರಿಸ್ಥಿತಿಗೆ ಬರಲು ಕಾರಣವಾಗಿದೆ. ಅವರ ಕಾಲೋನಿಯಲ್ಲಿ ಮತಗಳು ಕಡಿಮೆ ಬಂದಿವೆ ಎಂದಿದ್ದರು.
''ಸ್ವಾಭಾವಿಕವಾಗಿ ನಾವು ನಿಮ್ಮ ಅಪ್ಪಗೆ ಹುಟ್ಟಿದ್ರೆ ಹೊಡಿಯಪ್ಪ ಎಂದು ಹೇಳ್ತೀವಿ. ಅವನು ಹೊಡೆದರೆ ಮಾತ್ರ ಅವನು ಅಪ್ಪನಿಗೆ ಹುಟ್ಟಿದವನಲ್ಲ, ಇದು ಲೋಕಾರೂಢಿ. ಅಪ್ಪನಿಗೆ ಹುಟ್ಟಿದವರು ಮಾತ್ರ ಮತ ಹಾಕಿದ್ದು ಎಂದು ಅಂದಿದ್ದು ಸತ್ಯ'' ಎಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.