ದಾವಣಗೆರೆ:ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಕಳೆದ 28 ದಿನಗಳಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಬೆಣ್ಣೆ ನಗರಿ ಮಂದಿಗೆ ಶಾಕ್ ಆಗಿದೆ. ಸದ್ಯ ಗ್ರೀನ್ ಝೋನ್ನಲ್ಲಿದ್ದ ದಾವಣಗೆರೆಯಲ್ಲಿ ಈಗ ಆತಂಕ ಶುರುವಾಗಿದೆ. ಬಾಷಾ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿದ್ದ ಮಹಿಳೆಯ ಪರೀಕ್ಷಾ ವರದಿ ಪಾಸಿಟಿವ್ ಎಂದು ಬಂದಿದೆ.
ಎರಡು ದಿನಗಳ ಹಿಂದೆ ಮೈ ಕೈ ನೋವು, ತಲೆನೋವು ಇದ್ದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಶಿವಮೊಗ್ಗದ ಪ್ರಯೋಗಾಲಯಕ್ಕೆ ಗಂಟಲು ದ್ರವದ ಮಾದರಿ ಕಳುಹಿಸಲಾಗಿತ್ತು. ಇದೀಗ ಆಕೆಯ ಪತಿ ಹಾಗೂ ಇಬ್ಬರು ಮಕ್ಕಳ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಬಾಷಾ ನಗರದ ಮಹಿಳೆಯಲ್ಲಿ ಸೋಂಕು ಇರುವುದು ಪತ್ತೆ ಆಗುತ್ತಿದ್ದಂತೆ ಆ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿರುವ ಆಕೆಯ ಗಂಡ, ಇಬ್ಬರು ಮಕ್ಕಳು ಸೇರಿದಂತೆ ಹಲವರ ಮಾದರಿ ಪರೀಕ್ಷೆಗಾಗಿ ಕಳುಹಿಸುತ್ತೇವೆ. ಆಕೆಯ ಪುತ್ರ ವಿಜಯಪುರ ಅಥವಾ ಬಾಗಲಕೋಟೆಗೆ ಹೋಗಿ ಬಂದಿರಬಹುದು ಎಂಬ ಶಂಕೆ ಇದೆ. ಕೊರೊನಾ ಸೋಂಕು ಇದ್ದ ಜಿಲ್ಲೆಗಳಿಗೆ ಹೋಗಿ ಬಂದಿದ್ದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ.