ಕರ್ನಾಟಕ

karnataka

ETV Bharat / state

ಲೋಕೋಪಯೋಗಿ ಇಲಾಖೆಯ ಎಇಇ ಮತ್ತು ಎಇ ಭ್ರಷ್ಟಾಚಾರ.. ಆರೋಪ ತಳ್ಳಿಹಾಕಿದ ಅಧಿಕಾರಿ

ದಾವಣಗೆರೆಯ ಲೋಕೋಪಯೋಗಿ ಇಲಾಖೆಯ ಎಇಇ ಮತ್ತು ಎಇ ಅವರು ಲಂಚ ಕೇಳುತ್ತಿರುವ ಬಗ್ಗೆ ಆಡಿಯೋ ಮತ್ತು ವಿಡಿಯೋವನ್ನು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಬಿಡುಗಡೆ ಮಾಡಿ ತನಿಖೆಗೆ ಆಗ್ರಹಿಸಿದ್ದಾರೆ.

aee-and-ae-of-pwd-allegations-bribery
ಲೋಕೋಪಯೋಗಿ ಇಲಾಖೆಯ ಎಇಇ ಮತ್ತು ಎಇ ಮೇಲೆ ಲಂಚದ ಆರೋಪ

By

Published : Feb 8, 2023, 7:13 AM IST

ಲೋಕೋಪಯೋಗಿ ಇಲಾಖೆಯ ಎಇಇ ಮತ್ತು ಎಇ ಮೇಲೆ ಲಂಚದ ಆರೋಪ

ದಾವಣಗೆರೆ: ರಾಜ್ಯ ಸರ್ಕಾರದ ಮೇಲೆ ಗುತ್ತಿಗೆದಾರರ ಸಂಘದವರು 40% ಕಮಿಷನ್ ಆರೋಪ ಮಾಡಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ದಾವಣಗೆರೆಯ ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಎಇಇ, ಎಇ ಲಂಚಾವತಾರ ವಿಪರೀತವಾಗಿದ್ದು, ಒಂದು ಫೈಲ್​ಗೆ 40 ಸಾವಿರ ಫಿಕ್ಸ್ ಮಾಡಿ ಹಣ ಪಡೆಯುವ ಡೀಲ್ ಬಗ್ಗೆ ಸಂಭಾಷಣೆ ಮಾಡಿದ್ದಾರೆ ಎನ್ನಲಾದ ಆಡಿಯೋ, ವಿಡಿಯೋಗಳು ವೈರಲ್ ಆಗಿವೆ.

ದಾವಣಗೆರೆ ಪಿಡಬ್ಲೂಡಿ ಕಚೇರಿಯಲ್ಲಿ ಇಂಜಿನಿಯರ್​ಗಳು ಪ್ರತಿ ಫೈಲ್​ಗೆ 20 ರಿಂದ 40 ಸಾವಿರ ಫಿಕ್ಸ್ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಯ ಎಇಇ ನರೇಂದ್ರಬಾಬು ಎಂಬ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗು ಎಇ ವೀರಪ್ಪನವರ ಬಹಿರಂಗವಾಗಿ ಸಣ್ಣ ಸಣ್ಣ ಗುತ್ತಿಗೆದಾರರ ಬಳಿ ಲಂಚ ಕೇಳುವ ಆಡಿಯೋ ಮತ್ತು ವಿಡಿಯೋವನ್ನು ಗುತ್ತಿಗೆದಾರರು ಚಿತ್ರೀಕರಿಸಿದ್ದಾರೆ.

ಒಂದು ಫೈಲ್​ಗೆ 20 ರಿಂದ 40 ಸಾವಿರ ಲಂಚಕೊಡಬೇಕು ಎಂದು ಡಿಮ್ಯಾಂಡ್ ಮಾಡಲಾಗುತ್ತಿದೆ ಎಂದು ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಆಡಿಯೋ, ವಿಡಿಯೋ ದಾಖಲೆಗಳನ್ನು ಇಟ್ಟುಕೊಂಡು ಗಂಭೀರ ಆರೋಪ ಮಾಡುತ್ತಿದ್ದಾರೆ. ಹೆಚ್ಚು ಹಣ ಕೊಡಲಾಗುವುದಿಲ್ಲ ಎಂದು ಗುತ್ತಿಗೆದಾರರು ಹೇಳಿದ್ದೇ ತಡ ಎಇಇ ನರೇಂದ್ರ ಬಾಬು ಅವರು ನಾನು 25 ಲಕ್ಷ ಲಂಚ ಕೊಟ್ಟು ಎಇಇ ಪೋಸ್ಟ್​ಗೆ ಬಂದಿದ್ದೇನೆ, 20 ಸಾವಿರ ಹಣ ಬಿಸಾಕಿ ಎಂದು ಏರು ಧ್ವನಿಯಲ್ಲಿ ಹಣಕ್ಕಾಗಿ ವಿಡಿಯೋ ಹಾಗು ಆಡಿಯೋದಲ್ಲಿ ಇಂಜಿನಿಯರ್​ಗಳು ಡಿಮ್ಯಾಂಡ್ ಮಾಡಿದ್ದಾರೆ ಎಂಬುದು ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷರ ಆರೋಪವಾಗಿದೆ.

ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಈ ಬಗ್ಗೆ ಮಾತನಾಡಿ" ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು, ಲೋಕೋಪಯೋಗಿ ಇಲಾಖೆಯ ಎಇಇ ಆದಂತ ನರೇಂದ್ರ ಬಾಬು ಹಾಗು ಅಸಿಸ್ಟೆಂಟ್ ಇಂಜಿನಿಯರ್ ಆದಂತಹ ವೀರಪ್ಪರವರು ತಮ್ಮ ಕಚೇರಿಯಲ್ಲೇ ಗುತ್ತಿಗೆದಾರರಿಂದ ಒಂದು ಫೈಲಿಗೆ 40 ಸಾವಿರ ಲಂಚ ಪಡೆಯುತ್ತಿದ್ದು, ಈ ಸ್ಥಾನಕ್ಕೆ ಬರಲು ನಾನು 25 ರಿಂದ 50 ಲಕ್ಷ ಕೊಟ್ಟು ಬಂದಿದ್ದೇನೆ ಎಂದು ಹೇಳುವ ನರೇಂದ್ರ ಬಾಬುರವರ ಹೇಳುವ ವಿಡಿಯೋವನ್ನು ರಹಸ್ಯವಾಗಿ ಚಿತ್ರೀಕರಿಸಲಾಗಿದೆ. ಅವರ ಮೇಲೆ ಕ್ರಮ ಜರುಗಿಸಬೇಕೆಂದು" ಒತ್ತಾಯಿಸಿದರು.

ಲೋಕೋಪಯೋಗಿ ಇಲಾಖೆಯ ಎಇಇ ನರೇಂದ್ರ ಬಾಬು ಹೇಳುವುದೇನು?:ಇನ್ನು, ಈ ಭ್ರಷ್ಟಾಚಾರದ ಆರೋಪಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ಎಇಇ ನರೇಂದ್ರ ಬಾಬು ಅವರು," ನಾನು ಹಣ ಪಡೆದಿರುವ ಬಗ್ಗೆ ಮಾಹಿತಿ ಇಲ್ಲ, ನಾನು ಸದ್ಯ ಚುನಾವಣೆ ಇವಿಎಂ ಯಂತ್ರಗಳ ಬಗ್ಗೆ ಹಳ್ಳಿಗಳಲ್ಲಿ ಜಾಗೃತಿ ಕೆಲಸದಲ್ಲಿ ನಿರತನಾಗಿದ್ದೇನೆ. ಈ ವಿಚಾರದಲ್ಲಿ ನನ್ನ ವಿರುದ್ಧ ಲೋಕಾಯುಕ್ತಕ್ಕೆ ‌ದೂರು ನೀಡಿರುವುದು ನನಗೆ ಗೊತ್ತಿಲ್ಲ, ನಾನು ನನ್ನ ಸ್ಥಾನಕ್ಕೆ ಬರಬೇಕೆಂದರೆ 25 ಲಕ್ಷ ಕೊಟ್ಟು ಬಂದಿದ್ದೇನೆ ಎಂಬ ಹೇಳಿಕೆ ನೀಡಿಲ್ಲ, ಕೆಲ ಗುತ್ತಿಗೆದಾರರು ಬಂದಿದ್ದರು. ಅವರಿಗೆ ಕಾಮಗಾರಿ ಸ್ಥಳ ಪರಿಶೀಲನೆಗಾಗಿ ಕಳಿಸಿದ್ದೆ. ನಾನು ಭ್ರಷ್ಟಾಚಾರ ಮಾಡಿಲ್ಲ" ಎಂದು ಎಇಇ ನರೇಂದ್ರ ಬಾಬು ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದರು.

ಇದನ್ನೂ ಓದಿ:ಸಂಘಟನೆಯೊಂದರ ಕಾರ್ಯಕರ್ತನ ಹತ್ಯೆ: ಪೋಸ್ಟ್​ ಶೇರ್​ ಮಾಡಿ ಕೊಲೆ ಹೊಣೆ ಹೊತ್ತ ಯುವಕ

ABOUT THE AUTHOR

...view details