ದಾವಣಗೆರೆ:ಹಿರಿಯಶಾಸಕ, ಲಿಂಗಾಯತ ಸಮುದಾಯದ ಪ್ರಬಲ ನಾಯಕ ಶಾಮನೂರು ಶಿವಶಂಕರಪ್ಪನವರಿಗಿಂದು 93ನೇ ಹುಟ್ಟುಹಬ್ಬದ ಸಂಭ್ರಮ. ರಾಜ್ಯದ ಏಕೈಕ ಅತ್ಯಂತ ಹಿರಿಯ ಶಾಸಕ ಎಂದು ಹೆಸರುವಾಸಿಯಾಗಿರುವ ಶಿವಶಂಕರಪ್ಪನವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಜನ್ಮದಿನಕ್ಕೆ ಶುಭಕೋರಲು ದಾವಣಗೆರೆಗೆ ಅಭಿಮಾನಿಗಳ ದಂಡೇ ಹರಿದುಬಂದಿತ್ತು. ಹಿರಿ ವಯಸ್ಸಿನಲ್ಲೂ ಈ ಬಾರಿ ವಿಧಾನಸಭೆ ಚುನಾವಣೆ ಎದುರಿಸಿ ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಗೆಲುವಿನ ನಗೆ ಬೀರಿದ್ದರು. ರಾಜ್ಯ ರಾಜಕಾರಣದಲ್ಲಿ ಅವರ ಗೆಲುವು ಅಚ್ಚರಿ ಮೂಡಿಸಿತ್ತು. ವಿಧಾನಸಭೆಗೆ ಆಯ್ಕೆಯಾದ ರಾಜ್ಯದ ಏಕೈಕ ಹಿರಿಯ ಶಾಸಕ ಎಂದು ಹೆಗ್ಗಳಿಕೆಗೆ ಶಾಮನೂರು ಪಾತ್ರರಾಗಿದ್ದಾರೆ.
ಇಂದಿಗೂ ಕೂಡ ಉತ್ಸಾಹದಲ್ಲೇ ರಾಜಕೀಯ ಜೀವನ ಕಳೆಯುತ್ತಿದ್ದಾರೆ. ಇಷ್ಟು ಗಟ್ಟಿಮುಟ್ಟಾಗಿರುವ ಗುಟ್ಟೇನು ಎಂದು ಕೇಳಿದ್ರೆ, ಅದಕ್ಕೆ ಉತ್ತರಿಸಲು ಖಡಾಖಂಡಿತವಾಗಿ ಅವರು ನಿರಾಕರಿಸಿದರು. 93ಕ್ಕೆ ಪಾದಾರ್ಪಣೆ ಮಾಡಿರುವ ಶಾಮನೂರು ತಮ್ಮ ಜನ್ಮದಿನವನ್ನು ಎಸ್ಎಸ್ಹಾಲ್ನಲ್ಲಿ ಸಾವಿರಾರು ಅಭಿಮಾನಿಗಳು ಮಧ್ಯೆ ಆಚರಿಸಲಾಯಿತು. ಅರಣ್ಯ ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲಿ ದೊಡ್ಡ ಕೇಕ್ ಕಟ್ ಮಾಡಿದರು. ಹುಟ್ಟುಹಬ್ಬಕ್ಕೆ ಶುಭ ಕೋರಲು ಆಗಮಿಸಿದ್ದ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರಿಗೆ ವಿವಿಧ ಖಾದ್ಯ ಒಳಗೊಂಡಿರುವ ಭೋಜನದ ವ್ಯವಸ್ಥೆ ಮಾಡಲಾಗಿತ್ತು.