ದಾವಣಗೆರೆ: ಮಾಜಿ ಸಚಿವರೊಬ್ಬರ ಕಲ್ಲೇಶ್ವರ ಮಿಲ್ ಹಿಂಭಾಗದ ಫಾರ್ಮ್ ಹೌಸ್‌ನಲ್ಲಿ ಪತ್ತೆಯಾಗಿದ್ದ ವನ್ಯಜೀವಿಗಳನ್ನು ಇತ್ತೀಚೆಗೆ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯಕ್ಕೆ ಬಿಡಲಾಗಿದೆ. ಇವುಗಳಲ್ಲಿ ಒಂದು ಕೃಷ್ಣಮೃಗ ಹಾಗೂ ಕಾಡು ಹಂದಿ ಸಾವನ್ನಪ್ಪಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಡಿಸೆಂಬರ್ 21ರಂದು ಕಲ್ಲೇಶ್ವರ ಮಿಲ್ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೋಲಿಸರು, ಒಟ್ಟು 30 ವನ್ಯಜೀವಿಗಳನ್ನು ವಶಕ್ಕೆ ಪಡೆದು ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು. ಈ ಸಂಬಂಧ ಸಂಪಣ್ಣ, ಕರಿಬಸವಯ್ಯ, ಸೆಂಥಿಲ್ ಹಾಗೂ ಮಿಲ್ನ ಮಾಲೀಕರಾದ ಮಾಜಿ ಸಚಿವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ನ್ಯಾಯಾಲಯದ ಆದೇಶದಂತೆ ಪ್ರಾಣಿಗಳು ವಶಕ್ಕೆ: ಮಿಲ್‌ನಲ್ಲಿ ಪತ್ತೆಯಾದ ಆರು ಕಾಡು ಹಂದಿಗಳನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಇನ್ನುಳಿದ 22 ಕಾಡು ಪ್ರಾಣಿಗಳು ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಸುರಕ್ಷಿತವಾಗಿವೆ. ಒಟ್ಟು 30 ವನ್ಯಜೀವಿಗಳನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶದಂತೆ ಅರಣ್ಯ ಇಲಾಖೆ ಕಲ್ಲೇಶರ ಮಿಲ್ ಹಿಂಭಾಗದ ಫಾರ್ಮ್‌ಹೌಸ್‌ನಿಂದ ವಶಕ್ಕೆ ಪಡೆದು, ಕಿರು ಮೃಗಾಲಯಕ್ಕೆ ಸ್ಥಳಾಂತರಿಸಲಾಗಿತ್ತು. 11 ಕೃಷ್ಣಮೃಗ, 07 ಜಿಂಕೆ, 02 ನರಿ, 03 ಮುಂಗುಸಿ, 07 ಕಾಡು ಹಂದಿಗಳನ್ನು ಅರಣ್ಯ ಇಲಾಖೆಯ ನ್ಯಾಯಾಲಯದ ಆದೇಶದಂತೆ ವಶಕ್ಕೆ ಪಡೆದಿತ್ತು. ಈ ಪೈಕಿ ಈಗಾಗಲೇ ಮೃತಪಟ್ಟಿದ್ದ ಕಾಡು ಹಂದಿಯ ಕಳೇಬರವನ್ನು ಕೋರ್ಟ್ ಅದೇಶದಂತೆ ವಿಲೇವಾರಿ ಮಾಡಲಾಗಿದೆ. ಅಲ್ಲದೇ, ಸೋಮವಾರ ಒಂದು ಕೃಷ್ಣಮೃಗ ಸಾವನ್ನಪ್ಪಿದ್ದು, ಅದರ ದೇಹ ವಿಲೇವಾರಿಗಾಗಿ ನ್ಯಾಯಾಲಯಕ್ಕೆ ಅರಣ್ಯ ಇಲಾಖೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.