ಮಂಗಳೂರು: ರಾತ್ರಿ ಪೂರಾ ನಿದ್ದೆಗೆಟ್ಟು ತಿರುಗಾಟ ಮಾಡುತ್ತಿದ್ದ ಯಕ್ಷಗಾನ ಕಲಾವಿದರು ಇದೀಗ ಲಾಕ್ಡೌನ್ ಪರಿಣಾಮ ಮನೆಯಲ್ಲಿಯೇ ಇದ್ದಾರೆ. ಎಲ್ಲ ಕಲಾವಿದರು ಅನುಕೂಲಕ್ಕೆ ತಕ್ಕಂತೆ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಯಕ್ಷರಂಗದ 'ಅಭಿನವ ವಾಲ್ಮೀಕಿ' ಎಂದೇ ಪ್ರಖ್ಯಾತರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಭಾಗವತರು ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ವಿಶಿಷ್ಟ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ಕಟೀಲು ಮೇಳದಲ್ಲಿ ನಿರಂತರ 28 ವರ್ಷಗಳಿಂದ ಭಾಗವತರಾಗಿ ಸೇವೆ ಸಲ್ಲಿಸುತ್ತಿರುವ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಇದೀಗ ಮಂಗಳೂರಿನ ಹೊರವಲಯದ ಅಸೈಗೋಳಿ ಸಮೀಪದ ಬೊಟ್ಟಿಕೆರೆಯಲ್ಲಿರುವ ತಮ್ಮ ಮನೆ 'ಅಂಬುರುಹ'ದಲ್ಲಿ ಮಡದಿ, ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಲಾಕ್ಡೌನ್ ಅನ್ನು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ತಮ್ಮ ಮಕ್ಕಳು ಹಾಗೂ ಮನೆಯಲ್ಲಿಯೇ ಇರುವ ಶಿಷ್ಯರ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ.
ಲಾಕ್ ಡೌನ್ ಬಳಿಕ ಮನೆಯಲ್ಲಿಯೇ ಇದ್ದ ಪೂಂಜ ಅವರ ಮಕ್ಕಳಾದ ಜೀವಿತೇಶ್ ಪೂಂಜ ಮತ್ತು ಪರೀಕ್ಷಿತ್ ಪೂಂಜ, ಬೊಟ್ಟಿಕೆರೆ ಭಾಗವತರ ಶಿಷ್ಯರುಗಳಾದ ಯಕ್ಷ ಉತ್ಸಾಹಿ, ಉಪನ್ಯಾಸಕ ದೀವಿತ್ ಕೋಟ್ಯಾನ್, ಯುವ ಚಂಡೆ, ಮದ್ದಳೆಗಾರರಾದ ಮಯೂರ್ ನಾಯ್ಗ ಮತ್ತು ಕೀರ್ತನ್ ನಾಯ್ಗ ಹಾಗೂ ಕೌಶಿಕ್ ಮಂಜನಾಡಿ ಸೇರಿಕೊಂಡು ಬೊಟ್ಟಿಕೆರೆಯವರ ಮಾರ್ಗದರ್ಶನದಲ್ಲಿ 'ಅಂಬುರುಹ' ಮನೆಯ ಅಂಗಳದಲ್ಲಿ 'ಕೃಷ್ಣ ಕೀರ್ತನಾ' (ಪುರಂದರ ದಾಸರ ಕೃಷ್ಣಮೂರ್ತಿ ಆರಭಿ ರಾಗದ ಕೃತಿ) ಎಂಬ ಯಕ್ಷಗಾನವೂ, ಭರತನಾಟ್ಯವೂ ಮಿಶ್ರಿತ ಹೊಸ ನಾಟ್ಯ ಪ್ರಯೋಗವನ್ನು ಮಾಡಿದ್ದಾರೆ.
ಫೇಸ್ಬುಕ್ನಲ್ಲಿ ವಿಡಿಯೋಗೆ ಭಾರಿ ಪ್ರತಿಕ್ರಿಯೆ:
ಈ ನಾಟ್ಯ ಪ್ರಯೋಗದ ವಿಡಿಯೋ ಚಿತ್ರೀಕರಿಸಿ ಏಪ್ರಿಲ್ 2ರಂದು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋಗೆ ಬಹಳಷ್ಟು ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಯಿತು. ಅಲ್ಲದೆ ಸಾಕಷ್ಟು ಲೈಕ್, ಶೇರ್, ಕಮೆಂಟ್ಗಳು ಬಂದಿವೆ. ಇಲ್ಲಿಯವರೆಗೆ 'ಕೃಷ್ಣ ಕೀರ್ತನಾ'ವನ್ನು 19 ಸಾವಿರ ಮಂದಿ ವೀಕ್ಷಿಸಿದ್ದು, ಇದರಿಂದ ಪ್ರೇರಣೆಗೊಂಡು ಬಳಿಕ ಸರಸ್ವತಿ ಸ್ತುತಿ, ವಿನಾಯಕ ವೈಭವ, ದೇವಿ ಧ್ಯಾನ, ಕರುಣಾಬ್ಧಿರಾಮ, ಸ್ಕಂದ ಸ್ತುತಿ, ಗಣಪತಿ ಕೌತುಕ, ದಶಾವತಾರ, ರಂಗರಾಗ ಎಂಬ ಒಂಭತ್ತು ಪ್ರಯೋಗಗಳನ್ನು ತಮ್ಮ 'ಅಂಬುರಹ' ಮನೆಯ ಅಂಗಳದಲ್ಲಿ ಚಿತ್ರೀಕರಿಸಿ ಫೇಸ್ಬುಕ್ಗೆ ಅಪ್ಲೋಡ್ ಮಾಡಲಾಗಿದೆ. ಎಲ್ಲವನ್ನೂ ಸಾವಿರಾರು ಮಂದಿ ನೋಡಿ ಆನಂದಿಸಿದ್ದಾರೆ.
ಇಂತಹ ಪ್ರಯೋಗ ಸಾಕಷ್ಟು ಭರತನಾಟ್ಯ, ಯಕ್ಷಗಾನ ವಿದ್ಯಾರ್ಥಿಗಳಿಗೆ ಕಲಿಕೆಯ ಮಾರ್ಗವೂ ಆಗಿದೆ. ಅಲ್ಲದೇ ಯಾರೂ ಹೊರಗಿನ ಕಲಾವಿದರನ್ನು ಕರೆಸದೇ, ಮನೆಯಲ್ಲಿ ಇದ್ದವರೇ ಸಾಮಾಜಿಕ ಅಂತರ ಕಾಯ್ದುಕೊಂಡು, ಲಾಕ್ಡೌನ್ ಉಲ್ಲಂಘನೆ ಮಾಡದೇ ತಮ್ಮ ಸಮಯವನ್ನು ಸದ್ವಿನಿಯೋಗಗೊಳಿಸಿರೋದು ವಿಶೇಷವಾಗಿದೆ.
ಏನಿದು ಗಣಪತಿ ಕೌತುಕ?: