ಕರ್ನಾಟಕ

karnataka

ETV Bharat / state

'ಯಕ್ಷ ವಾಲ್ಮೀಕಿ' ಖ್ಯಾತಿಯ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಇನ್ನಿಲ್ಲ

'ಯಕ್ಷ ವಾಲ್ಮೀಕಿ' ಎಂದೇ ಚಿರಪರಿಚಿತರಾಗಿದ್ದ ಮಂಗಳೂರು‌ ತಾಲೂಕಿನ ಮಂಜನಾಡಿಯ ಬೊಟ್ಟಿಕೆರೆ ನಿವಾಸಿ ಪುರುಷೋತ್ತಮ ಪೂಂಜ ಕೊನೆಯುಸಿರೆಳೆದಿದ್ದಾರೆ.

Mangalore
ಬೊಟ್ಟಿಕೆರೆ ಪುರುಷೋತ್ತಮ ಪೂಂಜ

By

Published : Aug 15, 2021, 10:29 AM IST

ಮಂಗಳೂರು: ಖ್ಯಾತ ಭಾಗವತ, ಪ್ರಸಂಗಕರ್ತ 'ಯಕ್ಷ ವಾಲ್ಮೀಕಿ' ಬಿರುದಾಂಕಿತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ(68) ಅವರು ಅನಾರೋಗ್ಯದಿಂದ ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ.

ಕಳೆದ ವರ್ಷದಿಂದ ಅವರು ತೀವ್ರ ರಕ್ತ ಸಂಬಂಧಿ ಕಾಯಿಲೆ ಬಳಲುತ್ತಿದ್ದ ಅವರು, ಮಂಗಳೂರಿನ ಖಾಸಗಿ ನರ್ಸಿಂಗ್ ಹೋಂನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯಕೀಯದ ಪರಿಭಾಷೆಯಲ್ಲಿ ಅತ್ಯಂತ ವಿರಳವಾದ MYELODYSPLASIA ಕಾಯಿಲೆಯಿಂದ ಬಳಲುತ್ತಿದ್ದರು‌. ಆದರೆ ನಿನ್ನೆ ತಡರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಮಂಗಳೂರು‌ ತಾಲೂಕಿನ ಮಂಜನಾಡಿಯ ಬೊಟ್ಟಿಕೆರೆ ನಿವಾಸಿಯಾಗಿರುವ ಪುರುಷೋತ್ತಮ ಪೂಂಜ ಅವರು ಜೂನ್‌ 21, 1953ರಲ್ಲಿ ಜನಿಸಿದರು. ಬಿಎಸ್​ಸಿ ಪದವೀಧರರಾಗಿದ್ದ ಅವರು ಮುಂದೆ ಯಕ್ಷಗಾನ ಕ್ಷೇತ್ರದ ಆಕರ್ಷಣೆಯಿಂದ ಆನೆಗುಂಡಿ ಗಣಪತಿ ಭಟ್‌ ಮತ್ತು ಹೊಸಹಿತ್ಲು ಮಹಾಲಿಂಗಭಟ್ಟರ ಮಾರ್ಗದರ್ಶನದಲ್ಲಿ ಯಕ್ಷಗಾನದ ಹಿಮ್ಮೇಳ-ಮುಮ್ಮೇಳಗಳಲ್ಲಿ ಪರಿಣತಿ ಪಡೆದಿದ್ದರು.

ಯಕ್ಷಗಾನ ಕ್ಷೇತ್ರದ ಸರ್ವಾಂಗದಲ್ಲೂ ಪರಿಣಿತರೆನಿಸಿದ್ದ ಇವರು ಪರಂಪರೆಯ ಭಾಗವತರು, ವೇಷಧಾರಿ, ಮದ್ದಲೆ ವಾದಕರು ಮತ್ತು ಕೀರ್ತಿ ಪಡೆದ ಪ್ರಸಂಗಕರ್ತರಾಗಿದ್ದರು. ಭಾಗವತರಾಗಿ 45 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಉಪ್ಪಳ ಮೇಳ, ಮುಂಬೈಯ ಪ್ರಸಿದ್ಧ ಗೀತಾಂಬಿಕಾ ಮೇಳ, ಪುತ್ತೂರು ಮೇಳ, ಕರ್ನಾಟಕ ಮೇಳ, ಪ್ರಸಕ್ತ 30 ವರ್ಷಗಳಿಂದ ಕಟೀಲು ದೇವಿಯ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಭಾಗವತ ನಿಜ ಅರ್ಥದಲ್ಲಿ ರಂಗದ ನಿರ್ದೇಶಕ ಆಗಿರಬೇಕು ಎಂದು ಪ್ರತಿಪಾದನೆ ಮಾಡಿದವರು ಮತ್ತು ಅದನ್ನು ಅಕ್ಷರಶಃ ಪಾಲನೆ ಮಾಡಿಕೊಂಡು ಬಂದವರು. ಮೂರು ಶ್ರುತಿಯಲ್ಲಿ ಕೂಡ ಸುಲಲಿತವಾಗಿ ಮತ್ತು ಏಕ ಪ್ರಕಾರವಾಗಿ ಸಂಚರಿಸುವ, ಎಲ್ಲಾ ಭಾವಗಳನ್ನು ಮತ್ತು ರಸಗಳನ್ನು ಪೋಷಣೆ ಮಾಡುವ, ಸಾಹಿತ್ಯಕ್ಕೆ ಒಂದಿಷ್ಟು ಕೂಡ ಅಪಚಾರ ಮಾಡದೆ ಹಾಡುವ ಮಾಧುರ್ಯದ ಕಂಠ ಅವರದ್ದು. ರಾಗ, ತಾಳ, ಭಾವ ಎಲ್ಲವೂ ಎರಕ ಹೊಯ್ದು ಸಿರಿ ಕಂಠ ಅವರದ್ದು.

ಜೊತೆಗೆ ಕನ್ನಡ, ತುಳು ಎರಡೂ ಭಾಷೆಗಳಲ್ಲಿ 32 ಪ್ರಸಂಗಗಳನ್ನು ಬರೆದವರು. ಅವರ "ಮಾ ನಿಷಾದ"‌ ಪ್ರಸಂಗ ಬಹಳಷ್ಟು ಯಶಸ್ಸು ಗಳಿಸಿ, ಜನಮೆಚ್ಚುಗೆ ಗಳಿಸಿದ ಪ್ರಸಂಗ ಅಲ್ಲದೆ ವಧು ವೈಶಾಲಿನಿ, ನಳಿನಾಕ್ಷ ನಂದಿನಿ, ಉಭಯಕುಲ ಬಿಲ್ಲೋಜ, ಕ್ಷಾತ್ರ ಮೇಧ, ಮಾತಂಗ ಕನ್ಯೆ, ಗಾಂಗೇಯ, ಕಲಿ ಕೀಚಕ, ರಾಜಾ ದ್ರುಪದ, ಮೇಘ ಮಯೂರಿ, ಸ್ವರ್ಣ ನೂಪುರ, ಅಮೃತ ವರ್ಷಿಣಿ, ಮೇಘ ಮಾಣಿಕ್ಯ ಎಲ್ಲವೂ ಸೂಪರ್ ಹಿಟ್ ಪ್ರಸಂಗಗಳೇ ಆಗಿವೆ. ತುಳು ಭಾಷೆಯಲ್ಲಿ ಕೂಡ ಅವರು ಆರು ಪ್ರಸಂಗಗಳನ್ನು ಬರೆದಿದ್ದಾರೆ. ಕಳೆದ ಬಾರಿಯ ಲಾಕ್ ಡೌನ್‌ನಲ್ಲಿ‌ ಸಮಯ ಕಳೆಯಲೆಂದು ತಮ್ಮ ಮಕ್ಕಳು, ಶಿಷ್ಯರಿಗೆ ನಿರ್ದೇಶನ ಮಾಡಿ ಅವರಿಂದ ಯಕ್ಷಗಾನದ ವಿಶಿಷ್ಟ, ವಿರಳವಾದ ಕಲಾ ಪ್ರಕಾರಗಳನ್ನು ತಮ್ಮ ಮನೆಯ ಅಂಗಳದಲ್ಲಿಯೇ ಪ್ರದರ್ಶಿಸಿ ಅದನ್ನು ಚಿತ್ರೀಕರಿಸಿದ್ದರು‌. ಇದು ಜಾಲತಾಣಗಳಲ್ಲಿ ವೈರಲ್ ಆಗಿ ಬಹಳಷ್ಟು ಜನರ ಮೆಚ್ಚುಗೆ ಪಡೆದಿತ್ತು.

ABOUT THE AUTHOR

...view details