ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ನೆಪದಲ್ಲಿ ರಾಷ್ಟ್ರೀಯ ತನಿಖೆ ದಳ (ಎನ್ಐಎ)ವನ್ನು ಬಿಜೆಪಿ ದುರ್ಬಳಕೆ ಮಾಡುತ್ತಿದೆ ಎಂದು ಪಿಎಫ್ಐ ರಾಜ್ಯ ಕಾರ್ಯದರ್ಶಿ ಎಕೆ ಅಶ್ರಫ್ ಆರೋಪಿಸಿದರು.
ಮಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಫ್ಐ ನಾಯಕರು ಅನ್ನುವ ಕಾರಣಕ್ಕೆ ಮುಸ್ಲಿಂ ಮುಖಂಡರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಶಿವಮೊಗ್ಗದ ಹರ್ಷ ಮತ್ತು ಪ್ರವೀಣ್ ಕೇಸ್ ಎನ್ಐಎಗೆ ವಹಿಸಲಾಗಿದೆ. ಆದರೆ, ಇದರಲ್ಲಿ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ಬೆಳಗಾವಿಯ ಅರ್ಬಾಝ್, ಶಮೀರ್ ಪ್ರಕರಣದಲ್ಲಿ ಸಂಘಪರಿವಾರ ಇದೆ. ಈ ಪ್ರಕರಣಗಳನ್ನೂ ಯಾಕೆ ಸರ್ಕಾರ ಎನ್ಐಎಗೆ ವಹಿಸಿಲ್ಲ ಎಂದು ಪ್ರಶ್ನಿಸಿದರು.
ಬೆಳ್ಳಾರೆಯ ಮಸೂದ್ ಮತ್ತು ಸುರತ್ಕಲ್ ಫಾಜಿಲ್ ಕೇಸ್ ಯಾಕೆ ಎನ್ಐಎಗೆ ವಹಿಸಿಲ್ಲ. ರಾಜ್ಯದಲ್ಲಿ ನಡೆದ ಮುಸ್ಲಿಂ ಯುವಕರ ಹತ್ಯೆಯಲ್ಲಿ ಸಂಘಪರಿವಾರದ ಕೈವಾಡ ಇದೆ. ಆದರೆ, ಮುಸ್ಲಿಂ ಯುವಕರು ಆರೋಪಿಗಳಾಗಿರುವ ಪ್ರಕರಣಗಳನ್ನು ಮಾತ್ರ ಎನ್ಐಎಗೆ ವಹಿಸಲಾಗುತ್ತಿದೆ. ಈ ಮೂಲಕ ಬಿಜೆಪಿ ಸರ್ಕಾರ ಎನ್ಐಎ ಎಂಬ ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡುತ್ತಿದೆ ಎಂದು ಆಪಾದಿಸಿದರು.
ಬಿಜೆಪಿ ಕಾರ್ಯಕರ್ತರ ಸಮಾಧಾನ ಪಡಿಸಲು ಎನ್ಐಎ ದಾಳಿ:ಮಂಗಳವಾರ 30ಕ್ಕೂ ಅಧಿಕ ಕಡೆ ಎನ್ಐಎ ದಾಳಿ ನಡೆಸಿದೆ. ಕೆಲ ಪಿಎಫ್ಐ ಕಾರ್ಯಕರ್ತರು ಮತ್ತು ನಾಯಕರ ಮನೆಗಳ ಜೊತೆ ಮುಸ್ಲಿಂ ಯುವಕರ ಮನೆಗಳಿಗೆ ದಾಳಿ ನಡೆಸಲಾಗಿದೆ. ವಿಧಾನಸಭಾ ಚುನಾವಣೆ ಮುಂದಿಟ್ಟು ಈ ಕೆಲಸ ಮಾಡಲಾಗಿದೆ. ಪಿಎಫ್ಐ ಟಾರ್ಗೆಟ್ ಮಾಡಿ ಬಿಜೆಪಿ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಈ ದಾಳಿ ಮಾಡಲಾಗಿದೆ ಎಂದು ಎಕೆ ಅಶ್ರಫ್ ದೂರಿದರು.