ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣೇಶ ಚತುರ್ಥಿ ಮಾಡುವ ವಿಚಾರದಲ್ಲಿ ಎದ್ದಿರುವ ವಿವಾದ ಸುಖಾಂತ್ಯ ಕಂಡಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಕಳೆದ ಕೆಲ ವರ್ಷಗಳಿಂದ ಗಣೇಶ ಚತುರ್ಥಿ ಆಚರಣೆ ಮಾಡಲಾಗುತ್ತಿತ್ತು. ಅದಕ್ಕೂ ಹಿಂದೆ ವಿಶ್ವವಿದ್ಯಾನಿಲಯದ ಪುರುಷರ ಹಾಸ್ಟೆಲ್ನಲ್ಲಿ ಆಚರಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಮಂಗಳಾ ಸಭಾಂಗಣದಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡಲು ಅವಕಾಶವಿರುವುದಿಲ್ಲ ಎಂಬ ಕುಲಪತಿಗಳ ನಿರ್ಧಾರದಿಂದ ಅಸಮಾಧಾನ ಭುಗಿಲೆದ್ದಿತ್ತು.
ಆರಂಭದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಕುಲಪತಿಗಳಲ್ಲಿ ಈ ಬಗ್ಗೆ ಚರ್ಚಿಸಿ ಮಂಗಳ ಸಭಾಂಗಣದಲ್ಲಿಯೇ ಗಣೇಶ ಚತುರ್ಥಿ ಮಾಡಬೇಕು ಮತ್ತು ಎರಡು ಲಕ್ಷ ರೂಗಳನ್ನು ವಿಶ್ವವಿದ್ಯಾನಿಲಯದ ವತಿಯಿಂದ ನೀಡಬೇಕು ಎಂದು ಆಗ್ರಹಿಸಿದ್ದರು. ಈ ಬಗ್ಗೆ ಕುಲಪತಿಗಳು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಶಾಸಕ ವೇದವ್ಯಾಸ ಕಾಮತ್ ಎರಡು ಗಂಟೆಗಳ ಕಾಲ ಕಚೇರಿಯಲ್ಲಿ ಕುಳಿತು ಮಂಗಳ ಸಭಾಂಗಣದಲ್ಲಿ ಗಣೇಶ ಚತುರ್ಥಿ ಮಾಡುವಂತೆ ಬೆದರಿಸಿದ್ದರು ಎಂದು ಪತ್ರ ಬರೆದು ಈ ಬಗ್ಗೆ ಸಲಹೆ ಸೂಚನೆ ನೀಡುವಂತೆ ತಿಳಿಸಿದ್ದರು.
ಆ ಬಳಿಕ ಕುಲಪತಿಗಳು ಪ್ರಕಟಣೆ ಹೊರಡಿಸಿ, ಈ ಬಾರಿಯ ಗಣೇಶ ಚತುರ್ಥಿಯನ್ನು ಈ ಹಿಂದೆ ನಡೆಯುತ್ತಿದ್ದ ಪುರುಷರ ಹಾಸ್ಟೆಲ್ನಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದರು. ಆದರೂ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದೇ ಸಂದರ್ಭದಲ್ಲಿ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ಅವರು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣೇಶ ಚತುರ್ಥಿ ಮಾಡುವ ವಿಚಾರದಲ್ಲಿ ಹೊರಗಿನವರು ಬರುವುದು ಬೇಡ. ಅದು ಕುಲಪತಿಗಳು ನಿರ್ಧರಿಸಲಿ ಎಂದು ತಿಳಿಸಿದ್ದರು.