ಮಂಗಳೂರು:ಕೊರೊನಾ ಸೋಂಕಿಗೊಳಗಾಗಿ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರಕ್ಕೆ ಹಲವಾರು ನಿಯಮಗಳಿದೆ. ಸೋಂಕಿತರನ್ನು ಕಳೆದುಕೊಂಡ ಕುಟುಂಬಗಳು ಮೃತದೇಹದ ಅಂತ್ಯ ಸಂಸ್ಕಾರವನ್ನು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಮಾಡಬೇಕಾಗುತ್ತದೆ. ಇದರ ನಡುವೆ ಮಂಗಳೂರಿನಲ್ಲಿ ಸಾವನ್ನಪ್ಪಿದ ಕೊರೊನಾ ಸೋಂಕಿತರ ಮೃತದೇಹವನ್ನು ವಿಳಂಬವಾಗದಂತೆ ಹಸ್ತಾಂತರಿಸಲಾಗುತ್ತಿದೆ.
ಮೊದಲನೇ ಅಲೆಯ ಕೋವಿಡ್ ಹಾವಳಿಯ ಸಂದರ್ಭದಲ್ಲಿ ಕೊರೊನಾದಿಂದ ಮೃತ ಪಡುವವರ ಸಂಖ್ಯೆ ಬೆಂಗಳೂರು ಹೊರತು ಪಡಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿತ್ತು. ಇದೀಗ ಎರಡನೇ ಅಲೆಯ ಸಂದರ್ಭದಲ್ಲಿ ದಿನೇ ದಿನೆ ಕೊರೊನಾದಿಂದ ನಿಧನ ಹೊಂದುವವರ ಸಂಖ್ಯೆ ಹೆಚ್ಚಿದೆ. ಕೊರೊನಾ ಮೊದಲನೇ ಅಲೆ ಆರಂಭದಿಂದ ಈವರೆಗೆ ಜಿಲ್ಲೆಯಲ್ಲಿ 780 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿತರ ಅಂತ್ಯಸಂಸ್ಕಾರದ ವಿಚಾರದಲ್ಲಿ ಆರಂಭದಲ್ಲಿ ಕೆಲ ಗೊಂದಲಗಳು ಇದ್ದರೂ ಬಳಿಕ ಬಗೆಹರಿದಿದೆ.
ಕೋವಿಡ್ ಮೊದಲನೆ ಅಲೆಯಲ್ಲಿ ಪ್ರತಿದಿನ 10 ರಿಂದ 15 ಸಾವಿನ ಪ್ರಕರಣಗಳು ವರದಿಯಾಗುತ್ತಿದ್ದವು. ಇದೀಗ 5 ರಿಂದ 7 ಪ್ರಕರಣಗಳು ವರದಿಯಾಗುತ್ತಿದೆ. ಇನ್ನೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಮೃತದೇಹವನ್ನು ವಿಳಂಬವಾಗಿ ಅಂತ್ಯಕ್ರಿಯೆಗೆ ನೀಡಲಾಗಿದೆ ಎಂಬ ಆರೋಪ ಈವರೆಗೆ ವರದಿಯಾಗಿಲ್ಲ.