ಮಂಗಳೂರು: ನಗರದಲ್ಲಿ ಉಂಟಾಗಿರುವ ಜಲಕ್ಷಾಮದಿಂದಾಗಿ ದಕ್ಷಿಣ ಭಾರತಕ್ಕೆ ಯೂರಿಯಾ ಪೂರೈಸುವ ಏಕೈಕ ಕಾರ್ಖಾನೆ ಎಂಸಿಎಫ್( ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಸರ್) ಇನ್ನೆರಡು ದಿನಗಳಲ್ಲಿ ಮುಚ್ಚುವ ಭೀತಿಯನ್ನು ಎದುರಿಸುತ್ತಿದೆ.
ದಕ್ಷಿಣ ಭಾರತಕ್ಕೆ ಯೂರಿಯಾ ಪೂರೈಸುವ ಏಕೈಕ ಘಟಕ ಎಂಸಿಎಫ್ ಮುಚ್ಚುವ ಭೀತಿ... ಕಾರಣ?
ಇಡೀ ದಕ್ಷಿಣ ಭಾರತಕ್ಕೆ ಯೂರಿಯಾ ಪೂರೈಸುವ ಏಕೈಕ ಕಾರ್ಖಾನೆ ಎಂಸಿಎಫ್ ಸದ್ಯ ಮುಚ್ಚುವ ಭೀತಿ ಎದುರಿಸುತ್ತಿದೆ. ಕಾರಣ ನಗರದಲ್ಲಿ ತಲೆದೋರಿರುವ ನೀರಿನ ಕ್ಷಾಮ. ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದು ಇನ್ನೆರಡು ದಿನದಲ್ಲಿ ಕಾರ್ಖಾನೆಯ ಉತ್ಪಾದನೆ ಸ್ಥಗಿತಗೊಳ್ಳಲಿದೆ.
ನಗರದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸಂಥಿಲ್ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಎಂಸಿಎಫ್ ಕಾರ್ಖಾನೆಯನ್ನು ಶಡೌನ್ ಮಾಡುವಂತೆ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಎರಡು ತಿಂಗಳುಗಳ ಕಾಲ ಯೂರಿಯಾ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಆದರೆ ಎಪ್ರಿಲ್ ತಿಂಗಳಲ್ಲಿ ಎಂಸಿಎಫ್ ತಾನು ಸಂಗ್ರಸಿಟ್ಟಿದ್ದ ನೀರನ್ನೇ ಉಪಯೋಗಿಸುವ ಮೂಲಕ ಉತ್ಪಾದನೆ ಆರಂಭಿಸಿತ್ತು. ಆದರೆ ಈಗ ಸಂಗ್ರಹ ಮಾಡಿರುವ ನೀರೂ ಬರಿದಾಗಿದ್ದು, ಯೂರಿಯಾ ಉತ್ಪಾದನೆ ನಿಲ್ಲಿಸುವ ಅನಿವಾರ್ಯತೆ ಎದುರಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಎಂಸಿಎಫ್ ಯೂರಿಯಾ ಸ್ಥಾವರವು ದಿನದ 24 ಗಂಟೆಯೂ ಚಾಲನೆಯಲ್ಲಿದ್ದು, ಈ ಘಟಕ ಒಮ್ಮೆ ಮುಚ್ಚಿ ಮತ್ತೊಮ್ಮೆ ಉತ್ಪಾದನೆ ಅರಂಭ ಮಾಡುವಾಗ ಸುಮಾರು 5-6 ಕೋಟಿ ರೂ. ನಷ್ಟವಾಗುತ್ತದೆ. ಅಲ್ಲದೆ ಕೃಷಿ ಚಟುವಟಿಕೆ ಆರಂಭವಾಗುವ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಯೂರಿಯಾಕ್ಕೆ ಬಹಳ ಬೇಡಿಕೆ ಇರುತ್ತದೆ. ಇಡೀ ದಕ್ಷಿಣ ಭಾರತಕ್ಕೆ ಎಂಸಿಎಫ್ನಿಂದಲೇ ಯೂರಿಯಾ ಪೂರೈಕೆಯಾಗುತ್ತದೆ. ಆದರೆ ನೀರಿನ ಸಮಸ್ಯೆಯಿರುವ ಕಾರಣ ಇದು ಬಹುದೊಡ್ಡ ಪ್ರಮಾಣದ ನಷ್ಟವಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ.