ಕರ್ನಾಟಕ

karnataka

ETV Bharat / state

ಬಿಸಿಗಾಳಿ ಬೀಸುವ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ: ಬಿಸಿಲ ಬೇಗೆಯಿಂದ ಸುಡುತ್ತಿದೆ ರಾಜ್ಯ ಕರಾವಳಿ

ಈ ಬಾರಿ ಮಂಗಳೂರಿನಲ್ಲಿ ಬಿಸಿಲ ಬೇಗೆಯಿಂದ ಜನ ಅಕ್ಷರಶಃ ತತ್ತರಿಸಿದ್ದಾರೆ. ಬಿಸಿಲಿನ ಜಳವನ್ನು ತಪ್ಪಿಸಿಕೊಳ್ಳಲು ಜನ ಛತ್ರಿಯ ಮೊರೆ ಹೋಗುತ್ತಿದ್ದಾರೆ.

ಮಂಗಳೂರು
ಮಂಗಳೂರು

By

Published : Mar 10, 2023, 8:43 PM IST

ಭೂಗರ್ಭ ತಜ್ಞರಾದ ಪ್ರೋ. ಗಂಗಾಧರ್ ಅವರು ಮಾತನಾಡಿದರು

ಮಂಗಳೂರು :ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರಿಂದ ಬೇಸಿಗೆ ಕಾಲದಲ್ಲಿ ಸುಡುಬಿಸಿಲಿಗೆ ಹೈರಾಣಾಗಿದ್ದ ಕರಾವಳಿ ಜನ ಮತ್ತೆ ಆತಂಕಿತರಾಗಿದ್ದಾರೆ. ದಿನದಿಂದ ದಿನಕ್ಕೆ ಮಾನವ ಮರ ಗಿಡಗಳನ್ನು ನಾಶ ಮಾಡಿ ಕಾಂಕ್ರೀಟ್ ಕಾಡು ಬೆಳೆಸುತ್ತಿದ್ದಾನೆ. ಇದರ ಪರಿಣಾಮ ನಗರಗಳಲ್ಲಿ ವರುಷದಿಂದ ವರುಷಕ್ಕೆ ತಾಪಮಾನ ಏರಿಕೆಯಾಗುತ್ತಿದೆ.

ಕಡಲನಗರಿ ಮಂಗಳೂರಿನಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದೆ. ಸುಡು ಬಿಸಿಲಿನಿಂದಾಗಿ ಜನರಿಗೆ ಹೊರ ಬರುವುದಕ್ಕೂ ಕಷ್ಟಸಾಧ್ಯವಾಗುತ್ತಿದೆ. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಜನ ಛತ್ರಿಗಳ ಮೊರೆ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗುತ್ತಿದೆ. ಅಲ್ಲಲ್ಲಿ ಕಲ್ಲಂಗಡಿ, ಕಬ್ಬಿನ ಹಾಲು, ಎಳನೀರು ಮಾರಾಟದ ಅಂಗಡಿಗಳಲ್ಲಿ ಬಾಯಾರಿಕೆಯ ದಾಹವನ್ನು ಜನರು ತೀರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಇರುವ ಸೆಕೆ ಯಾವತ್ತೂ ಇರಲಿಲ್ಲ ಅನ್ನುತ್ತಾರೆ ಮಂಗಳೂರಿನ ಜನತೆ.

ಮಂಗಳೂರಿನಲ್ಲಿ ಎರಡು ದಿನಗಳ ಹಿಂದೆಯಷ್ಟೇ 38. 8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ದೇಶದಲ್ಲಿಯೇ ಅತಿ ಹೆಚ್ಚಿನ ತಾಪಮಾನ ದಾಖಲಾಗಿದೆ. ಮಂಗಳೂರಿನಲ್ಲಿ 2017ರಲ್ಲಿ 37.9 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿತ್ತು. ಆದರೆ, ಇದೇ ಮಾ. 2ರಂದು ದೇಶದಲ್ಲಿಯೇ ಗರಿಷ್ಠ ಎನಿಸಿದ್ದ 37.9 ಡಿಗ್ರಿ ಸೆಲ್ಸಿಯಸ್​ ದಾಖಲಾಗಿತ್ತು. ಇದಾಗಿ ಒಂದು ವಾರದ ಅಂತರದಲ್ಲಿ ತಾಪಮಾನದಲ್ಲಿ ಭಾರೀ ಏರಿಕೆಗಳು ಕಂಡಿದೆ.

ಆಂಟಿಸೈಕ್ಲೋನಿಕ್​​ ಪ್ರೆಶರ್​ನಿಂದ ಬಿಸಿ ಗಾಳಿ ಹೆಚ್ಚಳ: ಈ ತಾಪಮಾನ ಏರಿಕೆಯ ಬಗ್ಗೆ ಭೂಗರ್ಭ ತಜ್ಞ ಪ್ರೊ ಗಂಗಾಧರ್ ಅವರು ಮಾತನಾಡಿ, 'ಬಿಸಿಗಾಳಿ ಜಾಸ್ತಿ ಆಗಲು ಕಾರಣವೇನೆಂದರೆ ಸಮುದ್ರದ ತಾಪಮಾನ ಮತ್ತು ಭೂಮಿಯ ತಾಪಮಾನ ವ್ಯತ್ಯಯವಾಗುತ್ತಿದೆ. ಭೂಮಿಯಲ್ಲಿ ಆದ ಬದಲಾವಣೆಯಿಂದ ಭೂಮಿಯಲ್ಲಿ ಬರುವ ಬಿಸಿಗಾಳಿಯ ಪ್ರಭಾವ ಸಮುದ್ರದ ಗಾಳಿಗಿಂತ ಜಾಸ್ತಿಯಾಗಿ ಹಲವು ಪ್ರದೇಶಗಳಲ್ಲಿ ಬಿಸಿಗಾಳಿ ಬರಲು ಕಾರಣವಾಗಿದೆ. ಇದರಿಂದಾಗಿ ತಾಪಮಾನ ಜಾಸ್ತಿಯಾಗುತ್ತಿದೆ. ಇದು ನಿರ್ದಿಷ್ಟ ಸಮಯದಲ್ಲಿ ನಡೆಯುವ ಘಟನೆಗಳು. ಇದಕ್ಕೆ ಮೇಜರ್ ಕಾರಣ ಎಂದರೆ 'ಆಂಟಿಸೈಕ್ಲೋನಿಕ್​​ ಪ್ರೆಶರ್'​ ಪಶ್ಚಿಮ ಮಧ್ಯ ಅರೇಬಿಯನ್​ ಸಮುದ್ರದಲ್ಲಿ ಉಂಟಾದ ಬಿಸಿಗಾಳಿ ಪೂರ್ವದಿಂದ ಪಶ್ಚಿಮಕ್ಕೆ ಬೀಸಲು ಶುರುವಾಗಿದ್ದರಿಂದ ಸಮುದ್ರದ ಮೇಲಿನ ಗಾಳಿಯ ಪ್ರಭಾವ ಕಡಿಮೆಯಾಗಿ ಬಿಸಿಗಾಳಿಯಿಂದಾಗಿ ಟೆಂಪರೇಚರ್ ಜಾಸ್ತಿ ಆಗಿದೆ ಎಂದಿದ್ದಾರೆ'.

'ಬೈಕ್​ನಲ್ಲಿ ಬರುವಾಗ ಮೈ ಬಿಸಿಯಾಗುತ್ತದೆ. ನೀರು ಕೂಡ ಬಿಸಿಯಾಗುತ್ತದೆ. ಸ್ಟಾಲ್​ಗೆ ಹೋಗಿ ಜ್ಯೂಸ್ ಕುಡಿಯಬೇಕು ಅನಿಸುತ್ತದೆ. ನೀರಿನ ದಾಹ ಹೆಚ್ಚಾಗುತ್ತಿದೆ. ಮುಂಚೆ ಇಷ್ಟು ಸೆಕೆ ಇರಲಿಲ್ಲ. ಈ ಬಾರಿ ಈ ರೀತಿ ಇದೆ' ಎನ್ನುತ್ತಾರೆ ಸ್ಥಳೀಯರಾದ ವಿಶಾಲ ಎಂಬುವವರು.

ಕೆಲ ಪ್ರದೇಶಗಳಲ್ಲಿ ಬಿಸಿಗಾಳಿ ಬೀಸುವ ಎಚ್ಚರಿಕೆ : ಈ ಬಾರಿ ಬೇಸಗೆಯು ವಾಡಿಕೆಗಿಂತ ಮೊದಲೇ ಪ್ರಾರಂಭವಾಗಿದೆ. ಇದು ಪ್ರಾರಂಭವಷ್ಟೇ. ಮುಂದಿನ ವಾರದಲ್ಲಿ ಬಿಸಿಲ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯು ಹೇಳಿದೆ. ತೇವಾಂಶ ಕಡಿಮೆಯಾಗಿ ಮೋಡದ ವಾತಾವರಣ ಇಲ್ಲದಿರುವ ಪರಿಣಾಮ ಸುಡು ಬಿಸಿಲಿನ ಅನುಭವವಾಗುತ್ತಿದೆ.

ವಾತಾವರಣದಲ್ಲಿ ಬಿಸಿ ಹೆಚ್ಚಾಗಿ ತೇವಾಂಶ ಕಡಿಮೆಯಾಗುತ್ತಿದೆ. ಇದರ ಜೊತೆ ಕರಾವಳಿಯಲ್ಲಿ ಸಮುದ್ರದ ನೀರು ಬಿಸಿಯಾಗಿ ವಾತವರಣದಲ್ಲಿ ಬಿಸಿ ಏರಿಕೆಯಾಗುತ್ತಿದೆ. ಈ ನಡುವೆ ಹವಮಾನ ಇಲಾಖೆಯು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಬಿಸಿಗಾಳಿ ಬೀಸುವ ಎಚ್ಚರಿಕೆ ನೀಡಿದೆ. ತಾಪಮಾನ ಏರಿಕೆಯಾಗುತ್ತಿರುವ ಬಗ್ಗೆ ಜನ ಆತಂಕಗೊಂಡಿದ್ದಾರೆ. ಇದೇ ರೀತಿಯಾಗಿ ವಾತವರಣದಲ್ಲಿ ಉಷ್ಣಾಂಶ ಏರಿಕೆಯಾದರೆ ಮುಂದೆ ಜೀವನ ನಡೆಸಲು ಕಷ್ಟಸಾಧ್ಯವಾಗಲಿದೆ ಎಂದು ಆತಂಕಪಡುತ್ತಿದ್ದಾರೆ.

ಇದನ್ನೂ ಓದಿ :ಕೆ ಗುಡಿಯಲ್ಲಿ ಹುಲಿ ದರ್ಶನ: ಪ್ರವಾಸಿಗರ ಮುಂದೆ ಟೆರಿಟರಿ ಗುರುತಿಸಿದ ವ್ಯಾಘ್ರ

ABOUT THE AUTHOR

...view details